🖊️ ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ(ರಿ)
ವನ ಅಂದಿತು ಬಾಗಿಲಿಗೆ
ಬರಬೇಡ ಕಾಡಿಗೆ,
ಹೊಲ ಅಂದಿತು ನೇಗಿಲಿಗೆ
‘ಬರ’ ಬೇಡ ನಾಡಿಗೆ.
ಹೌದು, ಕಾಡು ನಾಡಿನ ಜನತೆಗೆ ನಿಮ್ಮ ಯಾವುದೇ ವನವಿನಾಶಕ ಯೋಜನೆ, ಯೋಚನೆಗಳನ್ನು ಹೊತ್ತುಕೊಂಡು ಕಾಡಿಗೆ ಬರಬೇಡಿ ಅಂದು ಬೇಡಿ ಕೊಳ್ಳುತ್ತಿದೆ. ಕೃಷಿ ಭೂಮಿ ಇಂದು ನೇಗಿಲನ್ನು ದೂರ ಮಾಡಿ ಹಸಿರು ಹೊದಿಕೆಯನ್ನು ಕಳೆದುಕೊಂಡು ಸೈಟು, ಫ್ಲ್ಯಾಟ್, ಪ್ಲಾಟ್ ಗಳಾಗುತ್ತಿರುವ ಕಾರಣ ಬರಗಾಲಕ್ಕೆ ಆಹ್ವಾನಗಳು ಆಗುತ್ತಿವೆ. ಜನ ಪ್ರತಿನಿಧಿಗಳ ‘ ಅಭಿವೃದ್ದಿ ‘ ಎಂಬ ನೆಪದ ವನಭಕ್ಷಕ ಯೋಜನೆಗಳಿಂದಾಗಿ, ಜನರಿಗೆ ಕಾಡು ಎಂಬ ನಿರ್ಲಕ್ಷ್ಯದಿಂದಾಗಿ ಆಧುನಿಕ ಸಾಮ್ರಾಜ್ಯ ವೇ ಬಾಗಲು, ಪ್ರಾಕೃತಿಕ ದುರಂತಗಳೇ ತೆರೆದಿಟ್ಟಿತು ಬಾಗಿಲು. ಪಶ್ಚಿಮ ಘಟ್ಟದ ಮೇಲೆ ಮಾನವ ಚಟುವಟಿಕೆಗಳು ಮಿತಿ ಮೀರಿ ದಬ್ಬಾಳಿಕೆ, ದೌರ್ಜನ್ಯಗಳನ್ನು ಮಾಡುತ್ತಿರುವ ಕಾರಣ ಅದರ ಪ್ರತೀಕಾರದ ಭಾಗವಾಗಿ ಜಲ ಸ್ಫೋಟ, ಭೂಕುಸಿತ, ಚಂಡ ಮಾರುತ, ಬರಗಾಲ ದಂತಹ ನೈಸರ್ಗಿಕ ದುರಂತಗಳನ್ನು ಅನುಭವಿಸುತ್ತಾ ಬಂದಿರುತ್ತೇವೆ. ಕೋರೋನ ದಂತಹ ಸಾಂಕ್ರಾಮಿಕ ರೋಗಕ್ಕೆ ಹೆದರಿ ಹೇಡಿ ಗಳಂತೆ ಮಾಸ್ಕ್ ಧರಿಸಿ ಮನೆಯೊಳಗೆ ಅವಿತು ಕುಳಿತಿರುತ್ತೇವೆ. ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿಯೇ ಆಗಿರುವ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಅದರ ಫಲಾನುಭವಿಗಳು ಆಗಿರುವ ಈ ನಾಡಿನ ಜನತೆ ತಮ್ಮ ಸ್ವಾರ್ಥಕ್ಕಾಗಿ ಯಾವ ರೀತಿಯಲ್ಲಿ ಕಿರುಕುಳ ನೀಡುತ್ತಾ , ಗೀರು ಗಾಯಗಳನ್ನು ಮಾಡುತ್ತಾ ಬಂದಿರುತ್ತಾರೆ ಹೊರತು ಅದರ ಒಳಿತಿನ ಬಗ್ಗೆ ಯೋಚಿಸಿದವರು ತೀರಾ ಕಡಿಮೆ.
ಸರಕಾರ, ರಾಜಕೀಯ ವ್ಯವಸ್ಥೆ ಬಿಡಿ… ಅದು ಪಶ್ಚಿಮ ಘಟ್ಟವನ್ನು ಮುಕ್ಕಿ ತಿನ್ನುವ ಸಾಮ್ರಾಜ್ಯ. ಕಳೆದ ಎರಡು ದಶಕಗಳಿಂದ ಅಭಿವೃದ್ದಿ ಎಂಬ ನೆಪದಲ್ಲಿ ಎಷ್ಟು ಕಾಡನ್ನು ಕತ್ತರಿಸಿ ಮುಗಿಸಿದ್ದೇವೆ. ಕಾಡ್ಗಿಚ್ಚು ಸೃಷ್ಟಿಸಿ ( ಎಲ್ಲಾ ಕಾಡ್ಗಿಚ್ಚು ಮಾನವ ನಿರ್ಮಿತವೆ ಹೊರತು ಪ್ರಕೃತಿ ನಿರ್ಮಿತ ಅಲ್ಲ ) ಎಷ್ಟು ಮರ,ಗಿಡ, ವನ್ಯಜೀವಿಗಳನ್ನು ಸುಟ್ಟು ಹಾಕಿದ್ದೇವೆ. ನೀರಾವರಿ ಯೋಜನೆಗಳಿಗಾಗಿ ಎಷ್ಟು ಕಾಡನ್ನು, ಕೃಷಿ ಭೂಮಿಯನ್ನು ಮುಳುಗಿಸಿ ಬಿಟ್ಟಿದ್ದೇವೆ, ಗಣಿಗಾರಿಕೆ ಮೂಲಕ ಎಷ್ಟು ಬೆಟ್ಟಗಳನ್ನು ಅಡ್ಡಡ್ಡ ಕತ್ತರಿಸಿ ಬಿಟ್ಟಿದ್ದೇವೆ, ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್ ಅಂತ ಹೇಳಿ ಎಷ್ಟೊಂದು ಅರಣ್ಯ ಪ್ರದೇಶವನ್ನು ಬರಡು ನೆಲವಾಗಿ ಪರಿವರ್ತನೆ ಮಾಡಿದ್ದೇವೆ, ಬೇಟೆ, ಮೋಜು, ಮಸ್ತಿ ಅಂತ ಹೇಳಿ ಎಷ್ಟೊಂದು ವನ್ಯ ಜೀವಿಗಳನ್ನು ತಿಂದು ತೇಗಿದ್ದೇವೆ, ರಸ್ತೆ, ವ್ಯವಸ್ಥೆ ಅಂತ ಎಷ್ಟೊಂದು ಮರಗಳನ್ನು ನಿರ್ದಾಕ್ಷಿನ್ಯವಾಗಿ ಕಡಿದು ಬಿಟ್ಟಿದ್ದೇವೆ, ನಗರದ ಬೆಳವಣಿಗೆ, ಸಿರಿತನ, ಆಧುನಿಕ ಸಾಮ್ರಾಜ್ಯ ನಿರ್ಮಾಣಕ್ಕೆ ಎಷ್ಟೊಂದು ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿದ್ಯ ಪ್ರದೇಶವನ್ನು ಲೂಟಿ ಮಾಡಿದ್ದೇವೆ….
ಹಂತ, ಹಂತಕ್ಕೂ ತಮ್ಮ ಸ್ವಾರ್ಥ, ಲಾಭ, ಮೋಹಕ್ಕಾಗಿ ಜನತೆ ಆಗಲಿ, ಜನ ಪ್ರತಿನಿಧಿಗಳೇ ಆಗಲಿ ಪಶ್ಚಿಮ ಘಟ್ಟವನ್ನು ಇನ್ಸ್ಟಾಲ್ ಮೆಂಟ್ ನಲ್ಲಿ ಕೊಂಡು ಕೊಂಡು, ಕೊಂದು ಕೊಂಡು ಬಂದದ್ದೇ ಹೊರತು ಪ್ರಕೃತಿಯ ವೇದನೆ, ರೋದನ, ಕಣ್ಣೀರಿಗೆ ಯಾರೂ ಲಕ್ಷ್ಯ ವಹಿಸದೇ ಇರುವ ಕಾರಣ ಜಲಸ್ಪೋಟ, ಭೂಕುಸಿತ, ಚಂಡ ಮಾರುತ, ನೆರೆ ಪ್ರವಾಹ, ಬರಗಾಲ, ಕ್ಷಾಮ, ತ್ಸುನಾಮಿ…. ಆಗದೇ ಮತ್ತಿನ್ನೆನಾಗಬೇಕು?
ಪ್ರಕೃತಿಗೂ ಒಂದು ತಾಳ್ಮೆ ಅಂತ ಇದೆ, ತಾಳ್ಮೆಗೋ ಒಂದು ಇತಿ ಮಿತಿ ಅಂತ ಇದೆ, ಅತಿ ಆದಾಗ ಅದು ಕೂಡಾ ಎಷ್ಟೂಂತ ಸಹಿಸಿ ಕೊಳ್ಳಬಹುದು ? ನಗರದ ಮಾಲ್, ಮಹಲ್ ಅಂತ ಮೋಜು, ಗೌಜಿಯ ಜನತೆ ಎಂದಾದರೂ ಈ ನಿಸರ್ಗ ಸಂರಕ್ಷಣೆಯ ಕಡೆಗೆ ಗಮನ ಹರಿಸಿದ್ದು ಉಂಟಾ ?
ವಿಶ್ವ ಪರಿಸರ ದಿನದಂದು ನಗರದಲ್ಲಿ ಒಂದಷ್ಟು ಜನರಿಗೆ ಪರಿಸರದ ನೆನಪಾಗುತ್ತದೆ, ಗಿಡಗಳ ನೆನಪಾಗುತ್ತದೆ.
ವನ ಮಹೋತ್ಸವ ಅಂತ ಹೇಳಿ ಒಂದಷ್ಟು ಕಾರ್ಪೊರೇಟ್ ಸಂಸ್ಥೆಗಳು, ಸರಕಾರಿ ಇಲಾಖೆಗಳು, ಅಧಿಕಾರಿಗಳು, ಶಾಸಕರು, ಸಚಿವರು ಇನ್ನು ಕೆಲವು ಸಂಘಟನೆಗಳು ಗಿಡ ನೆಡುವುದು ಛಾಯಾಚಿತ್ರ ಕೆ ಪೋಸು ನೀಡುವುದು ಇದ್ದದ್ದೇ. ಮರುದಿನಕ್ಕೆ ಅವರ ಪರಿಸರ ದಿನಾಚರಣೆ ಮುಕ್ತಾಯ ಆಗಿ ಮುಂದಿನ ವರ್ಷದ ಪರಿಸರ ದಿನಾಚರಣೆ ವರೆಗೆ ಗಿಡ ಗಳ ನೆನಪು ಆಗುವುದಿಲ್ಲ. ತಾವು ನೆಟ್ಟ ಗಿಡಗಳು ಸತ್ತಿದೆಯೋ ಬದುಕಿದೆಯಾ ಯಾವುದೋ ಗಮನ ನೀಡದ ನಕಲಿ ಪರಿಸರ ಪ್ರೇಮಿಗಳೇ ಇಂದು ಹೆಚ್ಚಾಗುತ್ತಿದ್ದಾರೆ.
ಅಂಕೋಲಾ ದ ವೃಕ್ಷ ಮಾತೆ ಪದ್ಮಶ್ರೀ ತುಳಸಿ ಗೌಡರವರು ಲಕ್ಷಾಂತರ ಗಿಡಗಳನ್ನು ನೆಟ್ಟು ಸಾಕಿ ಸಲಹಿದ ವರು. ಇಂದು ಸರಕಾರಿ ಕೃಪಾ ಪೋಷಿತ ವೃಕ್ಷ ಲಕ್ಷ ಆಂದೋಲನ, ಕೋಟಿ ವೃಕ್ಷ ಆಂದೋಲನ ದ ಬಗ್ಗೆ ಒಂದು ಮಾತು ಹೇಳುತ್ತಾರೆ, ‘ ಎಷ್ಟು ಲಕ್ಷ ಗಿಡ ನೆಟ್ಟಿದ್ದೀರಿ ಎಂಬುದು ಮುಖ್ಯ ಅಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ ವಹಿಸಿದ್ದೇವೆ ಎಂಬುದು ಮುಖ್ಯ ‘ ಈ ಮಾತು ನಮ್ಮನ್ನೆಲ್ಲಾ ತುಂಬಾ ಎಚ್ಚರಿಸುವಂತದ್ದು. ಗಿಡ ನೆಡುವುದು, ವನ ಮಹೋತ್ಸವ ಆಚರಿಸುವುದು ಮುಖ್ಯ ಅಲ್ಲ, ನೆಟ್ಟ ಗಿಡಗಳನ್ನು ಸಾಕಿ ಸಲಹಿ, ಬೆಳೆಸುವುದು ಮುಖ್ಯ ಆಗುತ್ತದೆ. ಜೂನ್ 5 ರಂದು ಮಾತ್ರ ಪರಿಸರ ದಿನಾಚರಣೆ ಅಲ್ಲ.., ವರ್ಷ ಪೂರ್ತಿ ಪರಿಸರ ದಿನಾಚರಣೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇಂದು ನಮ್ಮದಾಗಿದೆ.
ಗಿಡಗಳನ್ನು ನೆಡುವುದರ ಜೊತೆಗೆ ಆ ಕಡೆ ಪಶ್ಚಿಮ ಘಟ್ಟದಲ್ಲಿ ಯಾವುದೋ ಅಸಂಬದ್ಧ ಯೋಜನೆಗಾಗಿ ಅಗೋಚರವಾಗಿ ಲಕ್ಷಾಂತರ ಮರ, ಗಿಡಗಳನ್ನು ಕತ್ತರಿಸು ವಾಗಲೂ ಅದನ್ನು ತಡೆಯುವ ಸ್ವರ, ಕರ ನಮ್ಮದಾಗಬೇಕು.