
ಬೆಂಗಳೂರು: ಜ್ವರ, ಕೆಮ್ಮು, ನೆಗಡಿ ಹಾಗೂ ಇತರ ಅನಾರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಡಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ಬಗ್ಗೆ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಜ್ವರದಂತಹ ಅನಾರೋಗ್ಯ ಸಮಸ್ಯೆಗಳು ಕಂಡುಬಂದರೆ ಮಕ್ಕಳನ್ನು ಶಾಲೆಗೆ ಕಳುಹಿಸದೆ, ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಕ್ರಮಗಳನ್ನು ಪಾಲಿಸಬೇಕು. ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಶಾಲೆಯಲ್ಲಿ ಯಾವುದೇ ಮಗುವಿಗೆ ನೆಗಡಿ, ಜ್ವರ, ಕೆಮ್ಮು ಕಂಡುಬಂದಲ್ಲಿ ಕೂಡಲೇ ಪೋಷಕರಿಗೆ ಮಾಹಿತಿ ನೀಡಿ, ಮನೆಗೆ ಕಳುಹಿಸಬೇಕು. ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯಲ್ಲಿ ಜ್ವರದಂತಹ ಸಮಸ್ಯೆ ಕಾಣಿಸಿಕೊಂಡಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಿದ್ದಾರೆ. ಮಕ್ಕಳ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಉಸಿರಾಟದ ತೀವ್ರ ಸಮಸ್ಯೆಯ ಎಲ್ಲ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು ಎಂದು ಸೂಚಿಸಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು, ಶೇ 5ರಷ್ಟು ಶೀತಜ್ವರ ಮಾದರಿ ಅನಾರೋಗ್ಯ ಸಮಸ್ಯೆ ಪ್ರಕರಣಗಳಲ್ಲಿ ಗಂಟಲು ದ್ರವದ ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಕಳುಹಿಸಬೇಕು ಎಂದು ಕೋವಿಡ್ ನೋಡಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಅವರು ಸುತ್ತೋಲೆ ಹೊರಡಿಸಿದ್ದು, ಎಲ್ಲ ಕೋವಿಡ್ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗಾಲಯಗಳಲ್ಲಿಯೇ ನಡೆಸಬೇಕು. ಲಭ್ಯವಿರುವ ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.