ಬೆಂಗಳೂರು: ಕೊರೋನಾ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಆರ್‌ಟಿ-ಪಿಸಿಆರ್ ಸೋಂಕು ಪರೀಕ್ಷೆಗೆ ಒಳಪಟ್ಟ ಸಮಯದಿಂದಲೇ ಕೆಲವು ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕೊರೊನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.30ಕ್ಕೂ ಅಧಿಕವಿದೆ. ಪರೀಕ್ಷೆಗೊಳಪಡುವ ಪ್ರತಿ ಮೂವರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ಹೀಗಾಗಿ, ಕೊರೊನಾ ಸೋಂಕು ನಿಯಂತ್ರಣ ತಜ್ಞರ ಸಮಿತಿ ಶಿಫಾರಸ್ಸಿನ ಮೇರೆಗೆ ಸೋಂಕು ಪರೀಕ್ಷೆಗೆ ಬಂದವರ ಪೈಕಿ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ಥಳದಲ್ಲಿಯೇ ಕೆಲ ಮಾತ್ರೆ ನೀಡಬೇಕು.
ನಂತರ ಸೋಂಕು ದೃಢಪಟ್ಟರೆ ರಾಜ್ಯ ಸರ್ಕಾರದ ಚಿಕಿತ್ಸಾ ಮಾರ್ಗಸೂಚಿಯನ್ನು ಪಾಲಿಸಿ ಪೂರ್ಣ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ತಮ್ಮ ವೈದ್ಯರ ಸಲಹೆಯೊಂದಿಗೆ ಮಾತ್ರೆ ಚೀಟಿಯನ್ನು ನೀಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಮಾತ್ರೆಗಳ ವಿವರ: (ಮೂರು ದಿನ)
ಇವೆರ್ಮೆಕ್ಟಿನ್ 12 ಎಂಜಿ – ದಿನಕ್ಕೆ ಒಂದು (ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ)
ವಿಟಿಮಿನ್ ಸಿ 500 ಎಂಜಿ – ದಿನಕ್ಕೆ 3 (ಬೆಳಗ್ಗೆ, ಮಧ್ಯಾಹ್ನ, ರಾತ್ರಿ)
ಜಿಂಕ್ 50 ಎಂಜಿ – ದಿನಕ್ಕೆ ಒಂದು (ಮಧ್ಯಾಹ್ನ)
ಖಾಸಗಿ ಆಸ್ಪತ್ರೆಗಳು 100ರು.ಗಿಂತ ಅಧಿಕ ಲಸಿಕಾ ಸೇವಾ ಶುಲ್ಕ ಪಡೆವಂತಿಲ್ಲ
ಕೋವಿಡ್ ಲಸಿಕೆ ನೀಡುವ ಖಾಸಗಿ ಆರೋಗ್ಯ ಸಂಸ್ಥೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ 100 ರು. ಮಾತ್ರ ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚು ವಿಧಿಸುವ ಸಂಸ್ಥೆಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ.