ಕೊಲೊಂಬೋ: ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಟ್ವಿಟರ್ ಮೂಲಕ ನಿವೃತ್ತಿ ಘೋಷಣೆಯ ಸುದ್ದಿ ಪ್ರಕಟಿಸಿರುವ ಮಾಲಿಂಗ, ‘ನಾನು ನನ್ನ ಟಿ-20 ಶೂಗಳನ್ನು ಜೋತು ಹಾಕುತ್ತಿದ್ದೇನೆ. ಈ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿದ್ದೇನೆ.ನನ್ನ ಈ ಕೆರಿಯರ್ ನ ಉದ್ದಕ್ಕೂ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುವೆ.’ ಎಂದು ಹೇಳಿದ್ದಾರೆ.
ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ನಿವೃತ್ತಿ ಹೇಳಿದ್ದ ಮಾಲಿಂಗ ಟಿ-20 ಯಲ್ಲಿ ಮುಂದುವರೆದಿದ್ದರು. ಆದರೆ ಟಿ-20 ವಿಶ್ವಕಪ್ ಗೆ ಪ್ರಕಟಿಸಲಾದ ಲಂಕಾ ತಂಡದಲ್ಲಿ ಮಾಲಿಂಗ ಹೆಸರಿರಲಿಲ್ಲ.ಅದರ ಬೆನ್ನಲ್ಲೇ ನಿವೃತ್ತಿ ಪ್ರಕಟಿಸಿದ್ದಾರೆ.
ತನ್ನ ಯಾರ್ಕರ್ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದ ಮಾಲಿಂಗ ಶ್ರೀಲಂಕಾ ಪರ 30 ಟೆಸ್ಟ್ ಪಂದ್ಯಗಳಲ್ಲಿ ಆಡಿ 101 ವಿಕೆಟ್ ಪಡೆದಿದ್ದಾರೆ.226 ಏಕದಿನ ಪಂದ್ಯಗಳಿಂದ 338 ವಿಕೆಟ್ ಪಡೆದಿದ್ದಾರೆ.ಹಾಗೆಯೇ 83 ಟಿ-20 ಪಂದ್ಯಗಳಲ್ಲಿ 107 ವಿಕೆಟ್ ಪಡೆದು ಮಿಂಚಿದ್ದಾರೆ.ಐಪಿಎಲ್ ನಲ್ಲಿ ಮುಂಬಯಿ ಇಂಡಿಯನ್ಸ್ ಪರ ಹಲವಾರು ಋತುಗಳಲ್ಲಿ ಆಡಿ 122 ಪಂದ್ಯದಲ್ಲಿ 170 ವಿಕೆಟ್ ಉರುಳಿಸಿದ್ದಾರೆ.