ಚಿಕ್ಕಮಗಳೂರು (ಜುಲೈ 03): ವಿದ್ಯುತ್ ಆಘಾತದಿಂದ ಬೃಹತ್ ಗಾತ್ರದ ಕಾಡಾನೆ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ನಡೆದಿದೆ. ಮೀಸಲು ಅರಣ್ಯದಲ್ಲಿ ವಿದ್ಯುತ್ ಹೇಗೆ ಬಂತು ಎಂಬ ಅನುಮಾನ ಈಗ ಅಧಿಕಾರಿಗಳಿಗೆ ಕಾಡುತ್ತಿದೆ.
ಕಾಡಲ್ಲಿ ದಂತ ಹೊಂದಿದ್ದ ಬೃಹತ್ ಗಾತ್ರದ ಗಂಡಾನೆ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನೆ ಸಾವಿಗೆ ವಿದ್ಯುತ್ ಶಾಕ್ ಕಾರಣ ಎಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಸಿಬ್ಬಂದಿಗಳು ಸ್ಥಳದಲ್ಲಿ ಪಂಚನಾಮೆ ಹಾಗೂ ಮುಂದಿನ ತನಿಖೆ ಆರಂಭಿಸಿದ್ದಾರೆ. ಬೃಹತ್ ಗಾತ್ರದ ಕಾಡಾನೆ ಸಾವು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.




