ನವದೆಹಲಿ: ದಿನಬಳಕೆಯ ಗ್ಯಾಸ್ ಸಿಲಿಂಡರ್ ದರ ಇಂದು ಮಧ್ಯರಾತ್ರಿಯಿಂದಲೇ ದಿಡೀರ್ ಏರಿಕೆಯಾಗಿದೆ.
ಲಾಕ್ಡೌನ್ ಪೂರ್ಣಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರವನ್ನು ಹೆಚ್ಚಿಸುತ್ತಿದೆ.
ಈಗಾಗಲೇ ಲೀಟರ್ ಪೆಟ್ರೋಲ್ ದರ ದೇಶಾದ್ಯಂತ 90 ರೂಪಾಯಿ ಗಡಿ ದಾಟಿದ್ದು ಈಗ ಅಡುಗೆ ಅನಿಲದ ಬೆಲೆಯನ್ನು ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದೆ.
ನಾಳೆಯಿಂದ ಪ್ರತಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಾಗಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 769 ರೂಪಾಯಿ ಆಗಲಿದೆ. ಕರ್ನಾಟಕದಲ್ಲಿ ಪ್ರತಿ ಸಿಲಿಂಡರ್ ಬೆಲೆ 772 ರೂಪಾಯಿ ಆಗಲಿದೆ. ಈ ಮೊದಲು 722 ರೂಪಾಯಿ ಇತ್ತು. ರಾಜ್ಯದಿಂದ ರಾಜ್ಯಕ್ಕೆ ಈ ದರ ಭಿನ್ನವಾಗಿರಲಿದೆ.
2020ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ಜೂನ್, ಜುಲೈನಲ್ಲಿ ಮತ್ತೆ ಏರಿಕೆ ಕಂಡಿದ್ದ ದರ, ನಂತರ ನಾಲ್ಕು ತಿಂಗಳು ಯಾವುದೇ ಬದಲಾವಣೆ ಕಂಡಿರಲಿಲ್ಲ. 2021ರ ಜನವರಿ ತಿಂಗಳಲ್ಲಿ ಪ್ರತಿ ಸಿಲಿಂಡರ್ ದರ 100 ರೂಪಾಯಿ ಏರಿಕೆ ಆಗಿತ್ತು.
ಗ್ಯಾಸ್ ಗೆ ಸಿಗುತಿದ್ದ ಸಬ್ಸಿಡಿಯನ್ನೂ ಕೇಂದ್ರ ಸರ್ಕಾರ ಕೆಲವು ತಿಂಗಳುಗಳಿಂದ ತಡೆಹಿಡಿದಿದೆ.
ಪೆಟ್ರೋಲ್ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಹತ್ತು ದಿನಗಳ ಹಿಂದೆ ಇಪ್ಪತೈದು ರೂಪಾಯಿ ಏರಿಕೆ ಕಂಡಿದ್ದ ಅನಿಲ ಬೆಲೆ ಇಂದು ಮತ್ತೆ 50 ಏರಿಕೆ ಆಗಿದೆ.