ನೆಲಬಾಂಬು ಪತ್ತೆ ಮಾಡಿ ಚಿನ್ನದ ಪದಕ ಪಡೆದಿದ್ದ ಪ್ರಚಂಡ ಇಲಿ ನಿವೃತ್ತಿ; ಇದರ ಒಂದೊಂದು ಕಥೆಯೂ ರೋಚಕ!

ಕಾಂಬೋಡಿಯಾದಲ್ಲಿ ತನ್ನ ಐದು ವರ್ಷಗಳ ಸೇವಾ ಕಾಲದಲ್ಲಿ ಈ ಮೂಷಿಕವು 71 ನೆಲಬಾಂಬುಗಳನ್ನು ಹಾಗೂ 12ಕ್ಕೂ ಅಧಿಕ ಸ್ಫೋಟಗೊಳ್ಳದ ಭೂಸ್ಫೋಟಕಗಳನ್ನು ಮೂಸಿಕ ಕಂಡು ಹಿಡಿದಿತ್ತು.

ತನ್ನ ಅದ್ವಿತೀಯ ಸೇವೆಯ ಕಾರಣಕ್ಕೆ ಚಿನ್ನದ ಪದಕ ಪಡೆದು ವಿಶ್ವಾದ್ಯಂತ ಖ್ಯಾತವಾಗಿದ್ದ ಮಗಾವಾ ಎಂಬ ಇಲಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ತನ್ನ ಹೀರೋಯಿಸಂ ಕಾರಣಕ್ಕೆ ಅಲ್ಲ. ಬದಲಿಗೆ ತನ್ನ ಸುದೀರ್ಘ ವೃತ್ತಿ ಜೀವನದಿಂದ ನಿವೃತ್ತಿ ಪಡೆಯುತ್ತಿರುವ ಕಾರಣಕ್ಕೆ. ನೆಲಬಾಂಬು ಪತ್ತೆ ಮಾಡುವ ಪ್ರಾಣಿಗಳ ಪೈಕಿ ಅತ್ಯಂತ ಕುಶಾಗ್ರಮತಿ, ಚಾಣಾಕ್ಷ ಹಾಗೂ ಚುರುಕುತನಕ್ಕಾಗಿ ಕಳೆದ ಸೆಪ್ಟೆಂಬರ್ ನಲ್ಲಿ ಮಗಾವಾಗೆ ಪಿಡಿಎಸ್ಎ ಚಿನ್ನದ ಪದಕ ಒಲಿದು ಬಂದಿತ್ತು. ಈ ಪದಕವನ್ನು ಕರ್ತವ್ಯಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡುವ ಪ್ರಾಣಿಗಳ ಪಾಲಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ ಎಂದೂ ಪರಿಗಣಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರಶಸ್ತಿಯ 77 ವರ್ಷದ ಇತಿಹಾಸದಲ್ಲಿ ಒಂದು ಇಲಿ ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನವಾಗಿತ್ತು ಅಂದರೆ ಈ ಮೂಷಿಕದ ಅಗಾಧ ಪ್ರತಿಭೆಯನ್ನು ನಾವು ಅಂದಾಜಿಸಬಹುದು.

ಈ ಇಲಿ ಮಾಡಿದ್ದ ಸಾಧನೆ ಸಣ್ಣದೇನಲ್ಲ:

READ ALSO

ಮೂರ್ತಿ ಚಿಕ್ಕದಾದರೂ ಮಗಾವಾ ಇಲಿಯ ಕೀರ್ತಿ ಮಾತ್ರ ದೊಡ್ಡದು. ಇದರ ತೂಕ 1.2 ಕೆಜಿ ಮತ್ತು ಉದ್ದ 70 ಸೆಂಟಿ ಮೀಟರ್ಗಳು. ಸಾಮಾನ್ಯ ಇಲಿಗಳಿಗಿಂತಲೂ ಇದರ ಗಾತ್ರ ದೊಡ್ಡದಾದರೂ, ನೆಲಬಾಂಬು ಇತ್ಯಾದಿ ಸ್ಫೋಟಕದ ಮೇಲೆ ಓಡಾಡಿದರೂ ಅದು ಸ್ಫೋಟಗೊಳ್ಳದು ಎನ್ನುವಷ್ಟು ಸಣ್ಣ ಹಾಗೂ ಹಗುರವಾಗಿರುವುದು ಇದರ ವಿಶೇಷತೆ.

ಅದೇ ಕಾರಣಕ್ಕೆ ಮಗಾವಾನಂಥ ಹಲವಾರು ಇಲಿಗಳಿಗೆ ಸ್ಫೋಟಕಗಳಲ್ಲಿರುವ ರಾಸಾಯನಿಕಗಳನ್ನು ಪರಿಚಯಿಸುವ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅವು ಭೂಮಿಯೊಳಗಿನ ಗುಜರಿ ಲೋಹಗಳನ್ನು ನಿರ್ಲಕ್ಷಿಸಿ ನೆಲಬಾಂಬುಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ನೆಲಬಾಂಬು ಇತ್ಯಾದಿ ಭೂಮಿಯೊಳಗೆ ಅಡಗಿಸಿಡಲಾದ ಸ್ಫೋಟಕಗಳನ್ನು ಪತ್ತೆ ಹಚ್ಚಿದ ಕೂಡಲೇ ಅವು ಆ ಜಾಗದಲ್ಲಿ ನಿಂತು ತಲೆ ಕೆರೆದುಕೊಂಡು ತಮ್ಮೊಂದಿಗೆ ಇರುವ ಮನುಷ್ಯರಿಗೆ ಸಂಕೇತ ನೀಡುತ್ತದೆ. ಮುಂದಿನ ಕೆಲಸವನ್ನು ಮನುಷ್ಯರು ನಿರ್ವಹಿಸುತ್ತಾರೆ.

ಅಭೂತಪೂರ್ವ ಸಾಮರ್ಥ್ಯ, ಪ್ರತಿಭೆಯ ಮೂಷಿಕ!

ಕಾಂಬೋಡಿಯಾದಲ್ಲಿ ತನ್ನ ಐದು ವರ್ಷಗಳ ಸೇವಾ ಕಾಲದಲ್ಲಿ ಈ ಮೂಷಿಕವು 71 ನೆಲಬಾಂಬುಗಳನ್ನು ಹಾಗೂ 12ಕ್ಕೂ ಅಧಿಕ ಸ್ಫೋಟಗೊಳ್ಳದ ಭೂಸ್ಫೋಟಕಗಳನ್ನು ಮೂಸಿಕ ಕಂಡು ಹಿಡಿದಿತ್ತು. ತನ್ನ ಪತ್ತೆದಾರಿಕೆ ಶಕ್ತಿಯಿಂದಾಗಿ ಅತ್ಯಮೂಲ್ಯ ಪ್ರಾಣಿಯಾಗಿ ಕಾಂಬೋಡಿಯಾದಲ್ಲಿ ಮನೆಮಾತಾಗಿರುವ ಈ ಇಲಿಯ ಚುರುಕುತನ, ಸಾಮರ್ಥ್ಯ ನಿಬ್ಬೆರಗಾಗಿಸುತ್ತದೆ.

ಒಂದು ಟೆನಿಸ್ ಕೋರ್ಟ್ನಷ್ಟು ವಿಶಾಲವಾದ ಜಾಗದಲ್ಲಿ ನೆಲದಡಿ ಯಾವುದಾದರೂ ಸ್ಫೋಟಕ ಹುದುಗಿಸಲಾಗಿದೆಯೇ ಎಂದು ಪತ್ತೆದಾರಿಕೆ ಮಾಡುವ ಕೆಲಸವನ್ನು ಮಗಾವಾಗೆ ನೀಡಿದರೆ, ಕೇವಲ 20 ನಿಮಿಷಗಳಲ್ಲಿ ಆ ಕೆಲಸವನ್ನು ಮಾಡುವ ಸಾಮರ್ಥ್ಯ ಈ ಗಂಡು ಇಲಿಗೆ ಇದೆ. ಇದೇ ಕೆಲಸವನ್ನು ಲೋಹ ಶೋಧಕ ಯಂತ್ರ ಕೊಟ್ಟು ಮನುಷ್ಯನ ಕೈಯಲ್ಲಿ ಈ ಕೆಲಸ ಮಾಡಿಸಿದರೆ ಇವಿಷ್ಟು ಜಾಗದ ಶೋಧಕ್ಕಾಗಿ ಒಂದರಿಂದ ನಾಲ್ಕು ದಿನಗಳು ಬೇಕಾಗುತ್ತದೆಯಂತೆ.

ಪ್ರಚಂಡ ಪ್ರತಿಭೆ ಇದ್ದರೂ ನಿವೃತ್ತಿಯ ಮಾತೇಕೆ..?

ಮಗಾವಾ ಎಂಬುದು ಮೂತಿ ಬಳಿ ವಿಶಾಲಕಾಯದ ಚೀಲವಿರುವ ಆಫ್ರಿಕಾದ ಜಾತಿಗೆ ಸೇರಿದ ಇಲಿಯಾಗಿದ್ದು, ಇದಕ್ಕೆ ತಾಂಜೇನಿಯಾದಲ್ಲಿರುವ ಬೆಲ್ಜಿಯಂ ನೋಂದಾಯಿತ ದತ್ತಿಸಂಸ್ಥೆ ಅಪೊಪೊ ತರಬೇತಿ ನೀಡಿದೆ. ಈ ಸಂಸ್ಥೆ ಹೀರೋ ರ‍್ಯಾಟ್ಸ್ ಎಂದೇ ಖ್ಯಾತವಾಗಿರುವ ಇಲಿಗಳಿಗೆ 1990ರಿಂದಲೂ ನೆಲಬಾಂಬು ಪತ್ತೆಗೆ ತರಬೇತಿ ನೀಡುತ್ತಿದೆ. ತರಬೇತಿ ಪೂರ್ಣವಾದ ನಂತರ ಪ್ರಮಾಣ ಪತ್ರವನ್ನೂ ನೀಡುತ್ತದೆ.

ಹೀಗೆ ತರಬೇತಿ ಪಡೆದ ಮಗಾವಾ ಇಲಿಗೆ ಈಗ ಏಳು ವರ್ಷ. ಈ ಗಂಡು ಇಲಿಯನ್ನು ನಿರ್ವಹಿಸುವ ಮಲೆನ್ ಅವರ ಪ್ರಕಾರ, ಮಗಾವಾಗೆ ಈಗ ವಯಸ್ಸಾಗುತ್ತಿದೆ. ವಯೋಸಹಜವಾಗಿ ಅದೀಗ ಮೊದಲಿನ ಥರ ಚುರುಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಗಾವಾನ ಅಗತ್ಯಗಳನ್ನು ಗೌರವಿಸುವ ಹಿನ್ನೆಲೆಯಲ್ಲಿ ಅದರ ಸೇವಾ ವೃತ್ತಿಯಿಂದ ಬಿಡುಗಡೆ ನೀಡಲಾಗುತ್ತಿದೆ.

“ಮಗಾವಾನ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದದ್ದು. ಆತನ ಜತೆ ಕೆಲಸ ಮಾಡಲು ನನಗೆ ಹೆಮ್ಮೆಯಾಗುತ್ತಿತ್ತು. ಆತ ಪುಟ್ಟ ಕಾಯವನ್ನು ಹೊಂದಿದ್ದರೂ ಹಲವು ಪ್ರಾಣಗಳನ್ನು ಉಳಿಸುವ ಕೆಲಸ ಮಾಡಿದ್ದಾನೆ. ನೆಲವನ್ನು ನೆಲಬಾಂಬ್ ಮುಕ್ತಗೊಳಿಸಿ, ಅಗತ್ಯವಿರುವ ಜನರಿಗೆ ಒದಗಿಸುವ ಪ್ರಕ್ರಿಯೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುವಂತೆ ಮಾಡಿದ್ದಾನೆ.” ಎಂದು ಮಲೆನ್ ಅವರು ಮಗಾವಾನ ಗುಣಗಾನ ಮಾಡುತ್ತಾರೆ.

ಇನ್ನು ಮಗಾವಾನ ಜಾಗಕ್ಕೆ ಹೊಸ ಪೀಳಿಗೆಯ ಹೀರೋರ‍್ಯಾಟ್‍ಗಳು ಬರಲಿವೆ. ಅವು ಮಗಾವಾ ಉಳಿಸಿರುವ ಕೆಲಸವನ್ನು ಮುಂದುವರಿಸಲಿವೆ. ಜಗತ್ತು ನಡೆಯುವುದು ಹೀಗೇ ಅಲ್ಲವೇ?