ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೊಸಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 140 ಮಂದಿ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮರ್ ಮಾಹಿತಿ ನೀಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇತರೇ ಕಾರ್ಯಕ್ರಮಗಳ ಜೊತೆ ಸರಕಾರಿ ಕಾರ್ಯಕ್ರಮಗಳನ್ನು ನಮ್ಮ ಪಾಲುದಾರ ಬಂಧುಗಳಿಗೆ ಪರಿಚಯಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರೇರಣೆ ನೀಡುತಿದ್ದೆವೆ.
ಬಿಪಿಎಲ್ ಪಡಿತರ ಕಾರ್ಡು ಹೊಂದಿರುವವರು ಹಾಗೂ ರಾಷ್ರ್ಟೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯ. ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.
ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಚಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಊರಿನ ಹಿರಿಯರಾದ ಜಯರಾಮ್ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ ಒಕ್ಕೂಟದ ಅಧ್ಯಕ್ಷರಾದ ಆರತಿ ಮತ್ತು ಸೇವಾಪ್ರತಿನಿಧಿ ಸುಶೀಲಮ್ಮ ಉಪಸ್ಥಿತರಿದ್ದರು.