ದುಬೈ: ಯುದ್ಧದ ಪರಿಸ್ಥಿತಿಯಿಂದಾಗಿ ಇಸ್ರೇಲ್, ಇರಾನ್, ಇರಾಕ್, ಕುವೈತ್ ಮತ್ತು ಕತಾರ್ ದೇಶಗಳು ತಮ್ಮ ವಾಯುಮಾರ್ಗವನ್ನು ಮುಚ್ಚಿವೆ. ಇದರಿಂದಾಗಿ ಭಾರತದ ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಹಲವು ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ವಿಮಾನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇಸ್ರೇಲ್ ಮತ್ತು ಅಮೆರಿಕದ ಜಂಟಿ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಇರಾನ್ ಶನಿವಾರ ತಡರಾತ್ರಿ ಯುಎಇ, ಕತಾರ್ ಮತ್ತು ಸೌದಿ ಅರೇಬಿಯಾದ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನಲ್ಲಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಇರಾನ್ ತಿರುಗಿಬಿದ್ದಿದೆ. ಅಬುಧಾಬಿ, ದುಬೈ, ದೋಹಾ ಮತ್ತು ರಿಯಾದ್ ನಗರಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದೆ.
ಅಬುಧಾಬಿಯಲ್ಲಿ ಸಾವು: ಅಬುಧಾಬಿಯ ವಸತಿ ಪ್ರದೇಶವೊಂದರಲ್ಲಿ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಏಷ್ಯಾ ಮೂಲದ ಓರ್ವ ನಾಗರಿಕ ಮೃತಪಟ್ಟಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.
ದುಬೈನಲ್ಲಿ ಆತಂಕ: ದುಬೈ ನಿವಾಸಿಗಳು ಭಾರಿ ಸ್ಫೋಟದ ಸದ್ದು ಕೇಳಿಬಂದಿರುವುದಾಗಿ ಮತ್ತು ಆಕಾಶದಲ್ಲಿ ಬೆಂಕಿಯ ಉಂಡೆಗಳಂತೆ ಕ್ಷಿಪಣಿಗಳು ಸಾಗಿದ್ದನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಅಮೆರಿಕ ನೆಲೆಗಳ ಮೇಲೆ ಕಣ್ಣು: ಇರಾನ್ ದಾಳಿ ನಡೆಸಿದ ಎಲ್ಲಾ ನಗರಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳಿವೆ. ಅಬುಧಾಬಿಯ ಅಲ್ ದಫ್ರಾ ಮತ್ತು ದೋಹಾದ ಅಲ್ ಉದೈದ್ ವಾಯುನೆಲೆಗಳು ಅಮೆರಿಕದ ಪ್ರಮುಖ ಕೇಂದ್ರಗಳಾಗಿವೆ.
ಬಹ್ರೇನ್ ಮೇಲೂ ದಾಳಿ: ಮನಾಮದಲ್ಲಿರುವ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಬಹ್ರೇನ್ ಹೇಳಿದೆ.
ಸೌದಿ ಅರೇಬಿಯಾ ಈ ದಾಳಿಯನ್ನು “ಹೇಡಿಗಳ ಕೃತ್ಯ” ಎಂದು ಖಂಡಿಸಿದ್ದು, ಇರಾನ್‌ಗೆ ಇದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅತ್ತ ಇಸ್ರೇಲ್ ಪ್ರಧಾನಿ ನೆತನ್ಯಾಹು, “ಇರಾನ್‌ನಿಂದ ಎದುರಾಗಿರುವ ಅಸ್ತಿತ್ವದ ಭೀತಿಯನ್ನು ಎದುರಿಸಲು ನಾವು ಸಿದ್ಧ” ಎಂದು ಹೇಳಿದ್ದಾರೆ.





