ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಕಾರ್ಯಕ್ರಮದ ಮೂಲಕ ದುಶ್ಚಟಗಳನ್ನು ಬಿಟ್ಟು ನವಜೀವನಕ್ಕೆ ಕಾಲಿರಿಸಿದ ನವಜೀವನ ಸದಸ್ಯರಿಗೆ ಬದುಕು ಕಟ್ಟಿಕೊಳ್ಳಲು ಉಪಯುಕ್ತವಾಗುವಂತೆ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್) ಅರಿಶಿನಕುಂಟೆ ನೆಲಮಂಗಲ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಭಾರಿಗೆ 10 ದಿನಗಳ ಹೈನುಗಾರಿಕೆ ತರಬೇತಿಯನ್ನು ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ವತಿಯಿಂದ ನಡೆಸಲಾಯಿತು.
ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸಮಿತಿಯ ಪಾನಮುಕ್ತ ಸದಸ್ಯರಿಗೆ Rudset ಅರಿಶಿನಕುಂಟೆ ನೆಲಮಂಗಲದಲ್ಲಿ ವಿಶೇಷವಾಗಿ ಸ್ವಉದ್ಯೋಗದಡಿಯಲ್ಲಿ 10 ದಿನದ ಹೈನುಗಾರಿಕೆ ತರಬೇತಿ ಕಾರ್ಯಗಾರವನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ M ರವರು ಉದ್ಘಾಟಿಸಿದರು.
ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಧರ್ಮಸ್ಥಳದ ಧರ್ಮಾಧಿಕಾರಿಯವರು ಹೇಳಿದಂತೆ “ಸತತವಾಗಿ ಮೂರು ವರ್ಷ ಉನ್ನತ ವ್ಯಾಸಂಗ ಮಾಡಿ ಬೇರೆಯವರ ಲೆಕ್ಕ ಬರೆಯುವ ಬದಲು ಸ್ವಉದ್ಯೋಗ ಮಾಡಿ ತಮ್ಮ ಲೆಕ್ಕವನ್ನು ನಾವೇ ಬರೆಯುವುದು ಸೂಕ್ತ” ಇದಕ್ಕೆ ಪೂರಕವಾಗಿ ದುಶ್ಚಟ ಮುಕ್ತ ಜೀವನದೊಂದಿಗೆ ಸ್ವಾವಲಂಬಿಗಳಾಗಿ ಬದುಕಬೇಕು ಅದಕ್ಕೆ ಅನುಗುಣವಾಗಿ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಹಾಗೂ ಯಾವುದೇ ಕಷ್ಟದ ಸಮಯದಲ್ಲಿ ಮನೆಯಲ್ಲಿ ಒಂದು ಹಸು ಇದ್ದರೆ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎಂಬ ಹಿರಿಯರ ಮಾತಿನಂತೆ ನೀವು ಕೂಡ ಮಾದರಿ ಸದಸ್ಯರಾಗಿ ಬಾಳಿ ಬದುಕಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಉದಯ್ ಕುಮಾರ್, ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.
ತರಬೇತಿ ಕಾರ್ಯಕ್ರಮದಲ್ಲಿ 30 ಜನ ಪಾನಮುಕ್ತ ಸದಸ್ಯರು ಭಾಗವಹಿಸಿದ್ದು ತುಮಕೂರು ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆ ಯೋಜನಾ ಕಛೇರಿ ವ್ಯಾಪ್ತಿಯಿಂದ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ದಿನಾಂಕ 16.12.2020 ರಂದು ಈ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ.ರಾಮಸ್ವಾಮಿಯವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.