ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವರ್ಷ ಸಂಭವಿಸಿದ ಭಾರಿ ಪ್ರವಾಹ ಹಾಗೂ ಭೂ ಕುಸಿತದ ಸಂದರ್ಭ ಶಾಸಕ ಹರೀಶ್ ಪೂಂಜರು ‘ಕಾಳಜಿ ಫಂಡ್’ ಹೆಸರಿನಲ್ಲಿ ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹ ಮಾಡಿದ್ದಾರೆ. ಇದೀಗ ಒಂದು ವರ್ಷ ಕಳೆದರೂ ಅದರಿಂದ ಯಾರಿಗೂ ಒಂದು ರೂ. ಕೂಡಾ ವಿತರಿಸಿಲ್ಲ. ಇದರಲ್ಲಿ ಭಾರೀ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಕೆಲದಿನಗಳ ಹಿಂದೆ ಮಾಜಿ ಶಾಸಕ ಮತ್ತು ಕಾಂಗ್ರೆಸ್ ನಾಯಕ ಕೆ.ವಸಂತ ಬಂಗೇರ ಒತ್ತಾಯಿಸಿದ್ದರು.
ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್ ನಲ್ಲಿ ಸಂಗ್ರಹವಾದ ಒಟ್ಟು ಮೊತ್ತ 2,59,04,464.085 ಮೊಬಲಗು ಬೆಳ್ತಂಗಡಿಯ ಸಿಂಡಿಕೇಟ್ ಬ್ಯಾಂಕ್ ಖಾತೆ ನಂ: 01202200153274 ಜಮೆ ಇರುತ್ತದೆ ಎಂದು ಕಾಳಜಿ ರಿಲೀಫ್ ಫಂಡ್ ನ ಕೋಶಾಧಿಕಾರಿ ನಂದ ಕುಮಾರ್ ಯು.ಟಿ ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬೆಳ್ತಂಗಡಿ ಪ್ರವಾಸಿತಾಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ನ ಕಾರ್ಯದರ್ಶಿ ವಕೀಲರಾದ ಬಿ.ಕೆ. ಧನಂಜಯ ರಾವ್ ಮತ್ತು ಕೋಶಾಧಿಕಾರಿ ನಂದಕುಮಾರ್ ಯು.ಟಿಯವರು ಕೆನೆರಾ ಬ್ಯಾಂಕ್ ನ ಅಧಿಕೃತ ಮುದ್ರೆಯೊಂದಿಗೆ ಕಾಳಜಿ ಫಂಡ್ ನ ಲೆಕ್ಕಾಚಾರವನ್ನು ತಾಲೂಕಿನ ಜನತೆಯ ಮುಂದೆ ಇಟ್ಟಿದ್ದಾರೆ.
ಕಳೆದ ವರ್ಷದ 09-08-2019 ರಿಂದ ಇಂದಿನವರೆಗೆ ಕಾಳಜಿ ಫಂಡ್ ಗೆ ಜಮೆಯಾಗಿರುವ ಹಣದ ಮಾಹಿತಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾಳಜಿ ಬೆಳ್ತಂಗಡಿ ಫ್ಲಂಡ್ ರಿಲೀಫ್ ಫಂಡ್ ನ ಸದಸ್ಯರಾದ ಉಜಿರೆ ಸಂದ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ,ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ , ಲ್ಯಾನ್ಸಿ ಪಿಂಟೋ, ಜಯಕರ್ ಶೆಟ್ಟಿ, ಪ್ರವೀಣ್ ಇಂದ್ರ , ಗಣೇಶ್ ಗೌಡ , ಅಬುಬಕರ್ ಉಜಿರೆ ಉಪಸ್ಥಿತರಿದ್ದರು.