ಮಡಿಕೇರಿ: ಕೊಡಗಿನ ಕುವರಿ ಮಡಿಕೇರಿಯ ಪುಣ್ಯ ನಂಜಪ್ಪ ರವರು ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಯುದ್ಧ ವಿಮಾನದ ಪೈಲಟ್ ಆಗುವುದೆಂದರೆ ಸುಲಭದ ಮಾತಲ್ಲ ಅದರಲ್ಲೂ ಯುವತಿಯರು ಆ ಬಗ್ಗೆ ಪ್ರಯತ್ನ ಮಾಡುವುದೂ ಕಡಿಮೆಯೇ, ಸದ್ಯ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ.
ಕೊಡಗಿನ ಮಡಿಕೇರಿ ತಾಲೂಕಿನ ನಂಜಪ್ಪ ಮತ್ತು ಅನು ದಂಪತಿಯ ಮಗಳು ಪುಣ್ಯ 9ನೇ ತರಗತಿ ಓದುತ್ತಿರುವಾಗಲೇ ತಾನು ಪೈಲಟ್ ಆಗಬೇಕೆಂಬ ಕನಸು ಕಂಡಿದ್ದರು. ಆ ಕನಸನ್ನು ನನಸಾಗಿಸಿಕೊಳ್ಳಲೇಬೇಕೆಂಬ ಆಸೆಯಿಂದ ನಡೆಸಿದ ಪ್ರಯತ್ನ ಪುಣ್ಯ ರನ್ನು ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್ ಆಗುಂತೆ ಮಾಡಿದೆ.
ಕೊಡಗು ಜಿಲ್ಲೆಗೆ ದೊಡ್ಡ ಮಟ್ಟದ ಸೇನೆ ಪರಂಪರೆ ಇದ್ದೂ, ಪುಣ್ಯ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಒಮ್ಮೆ ಮೈಸೂರು ದಸರಾಗೆ ಹೋದ ಸಮಯದಲ್ಲಿ ಅಲ್ಲಿ ಹಾರುವ ಹೆಲಿಕಾಪ್ಟರ್‌ಗಳನ್ನು ನೋಡಿದ ಪುಣ್ಯ ಪೈಲಟ್ ಆಗುವ ಗುರಿ ಇಟ್ಟುಕೊಂಡರು.
ಇಂಜಿನಿಯರಿಂಗ್ ಪದವಿ ಪಡೆದಿರುವ ಪುಣ್ಯ ಪೈಲಟ್ ಆಗಬೇಕೆಂದು ಹೈದರಾಬಾದ್ನಲ್ಲಿ ಒಂದು ವರ್ಷದ ಸೇನಾ ತರಬೇತಿ ಪಡೆದರು. 2019ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ವಾಯುಸೇನೆಗೆ ಆಯ್ಕೆಯಾದರು. ಕೊನೆಗೂ ಅವರ ಪ್ರಯತ್ನಕ್ಕೆ ಫಲಸಿಕ್ಕಿದ್ದು, ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಇಂಜಿನಿಯರಿಂಗ್ ಓದಿ ಎಲ್ಲರಂತೆ ಒಂದು ಕಂಪನಿ ಸೇರದೇ, ಭಾರತೀಯ ಸೇನೆಗೆ ಸೇರಿ ಪುಣ್ಯ ಎಲ್ಲರ ಗಮನ ಸೆಳೆದಿದ್ದಾರೆ.