ಬೆಂಗಳೂರು: ದೇಶದಾದ್ಯಂತ ಹಬ್ಬದ ವಾತಾವರಣವಿದ್ದರು ksrrc ನೌಕರರಿಗೆ ಮಾತ್ರ ಹಬ್ಬದ ಸಂಭ್ರಮ ಮೂಡಿಲ್ಲ. ಕಳೆದ 6 ತಿಂಗಳುಗಳಿಂದ ಸರಿಯಾಗಿ ಕೆಲಸವಿಲ್ಲದೆ ಇದ್ದು ಇದೀಗ ರಾಜ್ಯದ 1.30 ಲಕ್ಷ ನೌಕರರಿಗೆ ಅಕ್ಟೋಬರ್ ತಿಂಗಳ ಸಂಬಳವಾಗದೆ ಹಬ್ಬದ ಸಂತಸವಿಲ್ಲದಂತಾಗಿದೆ.
ಕೋವಿಡ್ ಕಾರಣದಿಂದಾಗಿ ಈ ಬಾರಿ ಕೆಎಸ್ಆರ್‌ಟಿಸಿ ನೌಕರರಿಗೆ ವೇತನ ನೀಡದ ರಾಜ್ಯ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಇದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೋವಿಡ್ ಕಾರಣದಿಂದ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ಸಂಕಷ್ಟದಲ್ಲಿವೆ. ಈ ಕಾರಣದಿಂದಾಗಿ ಕಳೆದ ಆರು ತಿಂಗಳಿಂದ ನೌಕರರ ವೇತನ ಪಾವತಿಗೆ ಸರ್ಕಾರದ ನೆರವನ್ನು ಪಡೆಯಲಾಗುತ್ತಿದೆ. ಆದರೆ ಈ ಬಾರಿ ಸರ್ಕಾರದಿಂದ ಕೋರಿದ ನೆರವಿಗೆ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ 15 ದಿನ ಕಳೆದರೂ 1.30 ಲಕ್ಷ ನೌಕರರಿಗೆ ಅಕ್ಟೋಬರ್ ತಿಂಗಳ ಸಂಬಳವಾಗಿಲ್ಲ.
ಈ ಕುರಿತಾಗಿ ಟ್ವೀಟ್ ಮಾಡಿದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಎಸ್‌ಆರ್‌ಟಿಸಿಯ 4 ನಿಗಮಗಳ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ.
ಸ್ವತಃ ಉಪಮುಖ್ಯಮಂತ್ರಿ ಕೈಯಲ್ಲೇ ಸಾರಿಗೆ ಇಲಾಖೆಯಿದ್ದರೂ ಸುಮಾರು 1.35 ಲಕ್ಷ ನೌಕರರಿಗೆ ಸಂಬಳ ಆಗಿಲ್ಲ ಎಂದು ಕಿಡಿಕಾರಿದ್ದಾರೆ. ಸಂಬಳ ಇಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಆಚರಿಸದಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಕೂಡಲೇ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.