ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

ಬೆಳ್ತಂಗಡಿ: ಪಡ್ಲಾಡಿ–ನಿನ್ನಿಕಲ್ಲು ಬಳಿಯ ನೇತಾಜಿ ಬಡಾವಣೆಯ ನಿವೇಶನ ಹಂಚಿಕೆ, ಖಾಲಿ ನಿವೇಶನಗಳಿಗೆ ಬ್ಯಾಂಕ್ ಸಾಲ ನೀಡಿರುವುದು, ನಿವೇಶನಗಳ ಅನಧಿಕೃತ ಮಾರಾಟ ಹಾಗೂ ಮನೆ ನಿರ್ಮಿಸಿ ಬಾಡಿಗೆಗೆ ನೀಡಿರುವ ಆರೋಪ, ಸರ್ಕಾರಿ ಜಮೀನು ಅತಿಕ್ರಮಣ, ಪುತ್ರಬೈಲು ಗ್ರಂಥಾಲಯ ಮತ್ತು ಎನ್‌ಆರ್‌ಎಲ್‌ಎಂ ಕಟ್ಟಡಗಳ ಕಳಪೆ ಕಾಮಗಾರಿ, ಅನಧಿಕೃತ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಗಂಭೀರ ವಿಚಾರಗಳು ಲಾಯಿಲ ಗ್ರಾಮಸಭೆಯಲ್ಲಿ ಆ.29 ರಂದು ತೀವ್ರ ಚರ್ಚೆಗೆ ಗ್ರಾಸವಾದವು.ವಿವಿಧ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತನಿಖೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಆಗಸ್ಟ್ 29ರಂದು ಲಾಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಆಡಳಿತಾಧಿಕಾರಿ ರಾಜೇಂದ್ರ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ನಡೆಯಿತು. ಬೆಳಗ್ಗೆ 10.45ಕ್ಕೆ ಆರಂಭವಾದ ಸಭೆ ಸಂಜೆ 4.30ರವರೆಗೆ ಸುದೀರ್ಘವಾಗಿ ನಡೆಯಿತು.

ಖಾಲಿ ನಿವೇಶನ ವಾಪಸ್ ಪಡೆದು ನಿವೇಶನ ರಹಿತರಿಗೆ ಹಂಚಿಕೆಗೆ ಆಗ್ರಹ:

2012ರಲ್ಲಿ ನೇತಾಜಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾದ ನಿವೇಶನಗಳಲ್ಲಿ ಇದುವರೆಗೆ ಮನೆ ನಿರ್ಮಾಣ ಮಾಡದಿರುವ ಖಾಲಿ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆದು ಅರ್ಹ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಆಗ್ರಹಿಸಿದರು.ಇದಕ್ಕೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಬಿ.ಎಲ್., ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಗಣೇಶ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.ಈ ವೇಳೆ ಸಭೆಯಲ್ಲಿದ್ದ ನಿವೇಶನ ರಹಿತರು, ಕಳೆದ 10ರಿಂದ 15 ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೂ ತಮಗೆ ನಿವೇಶನ ದೊರೆತಿಲ್ಲ. ಬಡಾವಣೆಯಲ್ಲಿರುವ ಖಾಲಿ ನಿವೇಶನಗಳನ್ನು ಅರ್ಹ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

02.45 ಸೆಂಟ್ಸ್ ಜಾಗಕ್ಕೆ ಲಕ್ಷಾಂತರ ಸಾಲ ಹೇಗೆ?:

ಗ್ರಾಮಸ್ಥ ಶೇಖರ್ ಎಲ್. ಮಾತನಾಡಿ, ಇಲ್ಲಿನ 02.45 ಸೆಂಟ್ಸ್ ಜಮೀನಿನ ಹೆಸರಿನಲ್ಲಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ಲಕ್ಷಾಂತರ ರೂಪಾಯಿ ಸಾಲ ನೀಡಿವೆ ಎಂಬ ಆರೋಪ ಮಾಡಿದರು.ಬಡ ರೈತರು ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಸಾಲ ನೀಡಲು ಹಿಂದೇಟು ಹಾಕುವ ಬ್ಯಾಂಕುಗಳು, ಈ ನಿವೇಶನಗಳ ಆಧಾರದಲ್ಲಿ ಮಾತ್ರ ಲಕ್ಷಾಂತರ ರೂಪಾಯಿ ಸಾಲ ನೀಡಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ನಿವೇಶನಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗಿದೆ ಹಾಗೂ ಕೆಲವರು ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ ಎಂಬ ಆರೋಪಗಳಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.ಈ ವೇಳೆ ಸುಧಾಕರ ಎಲ್. ಮಾತನಾಡಿ, ಕೆಲವರು ಈಗಾಗಲೇ ಸ್ವಂತ ಜಮೀನು ಹೊಂದಿದ್ದರೂ 94ಸಿ ಸೇರಿದಂತೆ ಸರ್ಕಾರಿ ಜಮೀನುಗಳನ್ನು ಅತಿಕ್ರಮಿಸಿಕೊಂಡು ಮನೆ ಹಾಗೂ ತೋಟ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗ್ರಂಥಾಲಯ ಕಟ್ಟಡದ ಮೇಲ್ಭಾಗಕ್ಕೆ ಶೀಟ್ ಏಕೆ?:

ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಪುತ್ರಬೈಲು ಗ್ರಂಥಾಲಯ ಕಟ್ಟಡದ ಮೇಲ್ಭಾಗಕ್ಕೆ ಶೀಟ್ ಅಳವಡಿಸಿರುವ ವಿಚಾರವೂ ಗ್ರಾಮಸಭೆಯಲ್ಲಿ ಚರ್ಚೆಗೆ ಬಂತು. ಕಟ್ಟಡಕ್ಕೆ ಶೀಟ್ ಅಳವಡಿಸಿರುವುದಕ್ಕೆ ಕಾರಣವೇನು ಎಂದು ಶ್ರೀನಿವಾಸ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯತ್ ಪಿಡಿಓ ತಾರಾನಾಥ ನಾಯ್ಕ್, ಕಟ್ಟಡದಲ್ಲಿ ಸೋರಿಕೆ ಉಂಟಾಗಿದ್ದರಿಂದ ಸೋರಿಕೆ ತಡೆಗಟ್ಟಲು ಶೀಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.ಇದಕ್ಕೆ ಮಧ್ಯಪ್ರವೇಶಿಸಿದ ಶೇಖರ್ ಲಾಯಿಲ, ಕಟ್ಟಡವನ್ನು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸುವ ಸಂದರ್ಭದಲ್ಲಿಯೇ ಸೋರಿಕೆಯಾಗಿತ್ತು. ಕಟ್ಟಡದ ಕಳಪೆ ಕಾಮಗಾರಿಯನ್ನು ಮರೆಮಾಚಲು ಶೀಟ್ ಅಳವಡಿಸಲಾಗಿದೆ ಎಂಬ ಆರೋಪ ಮಾಡಿದರು. ಕಟ್ಟಡ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಗ್ರಾಮಸಭೆಯ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜನಾರ್ದನ ಮಾತನಾಡಿ, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಮಾತನಾಡಿ, ಎನ್‌ಆರ್‌ಎಲ್‌ಎಂ ಕಟ್ಟಡದ ಕಾಮಗಾರಿಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮ ಕಟ್ಟಡದ ವಿರುದ್ಧದ ದೂರು ಪ್ರತಿಗಳು ಸಂಬಂಧಪಟ್ಟವರಿಗೆ ರವಾನೆ ಆರೋಪ:

ಲಾಯಿಲ ಅಭ್ಯಾಸ್ ಪಿಯು ಕಾಲೇಜಿನ ಅನಧಿಕೃತ ಕಟ್ಟಡಗಳ ಕುರಿತು ಗ್ರಾಮ ಪಂಚಾಯತ್‌ಗೆ ನೀಡಲಾದ ದೂರಿನ ಪ್ರತಿಯನ್ನು ಕೆಲವೇ ನಿಮಿಷಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ರವಾನಿಸಲಾಗುತ್ತಿದ್ದು, ಬಳಿಕ ಅವರಿಂದ ದೂರವಾಣಿ ಕರೆಗಳು ಬರುತ್ತಿವೆ ಎಂದು ಆರ್‌ಟಿಐ ಕಾರ್ಯಕರ್ತ ಪ್ರತೀಕ್ ಕೋಟ್ಯಾನ್ ಗಂಭೀರ ಆರೋಪ ಮಾಡಿದರು.ಈ ಪ್ರಕರಣದ ಹಿಂದೆ ಹಿಂದಿನ ಪಿಡಿಓ ಶ್ರೀನಿವಾಸ್ ಅವರ ಕೈವಾಡವಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಶೇಖರ್ ಲಾಯಿಲ ಮಾತನಾಡಿ, ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ನೀಡುವ ದೂರುಗಳ ಪ್ರತಿಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ರವಾನೆಯಾಗುತ್ತಿವೆ ಎನ್ನುವ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾಮ ಪಂಚಾಯತ್‌ಗೆ ಸಾರ್ವಜನಿಕರು ಸಲ್ಲಿಸುವ ದೂರುಗಳ ಪ್ರತಿಗಳನ್ನು ಸಿಬ್ಬಂದಿ ಇತರರಿಗೆ ರವಾನಿಸುತ್ತಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಜಮೀನಿನಲ್ಲಿ ಪಂಚಾಯತ್ ಸಿಬ್ಬಂದಿಯಿಂದ ಮನೆ ನಿರ್ಮಾಣ?:

ನೇತಾಜಿ ಬಡಾವಣೆಯ ಸಮೀಪ ಸರ್ಕಾರಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂಬ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸುರೇಶ್ ಬೈರ ಮಾತನಾಡಿ, ಪಂಚಾಯತ್ ಸಿಬ್ಬಂದಿ ಸೂರಪ್ಪ ಅವರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸುತ್ತಿದ್ದು, ಅವರಿಗೆ ಪಂಚಾಯತ್ ಅನುಮತಿ ನೀಡಬೇಕು ಎಂದು ಹೇಳಿದರು.ಇದಕ್ಕೆ ಪಿಡಿಓ ತಾರಾನಾಥ ನಾಯ್ಕ್ ಪ್ರತಿಕ್ರಿಯಿಸಿ, ಸರ್ಕಾರಿ ಜಮೀನಿನಲ್ಲಿ ನಿರ್ಮಿಸುವ ಯಾವುದೇ ಕಟ್ಟಡಕ್ಕೆ ಪಂಚಾಯತ್ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಗ್ರಾಮ ಆಡಳಿತಾಧಿಕಾರಿ ರನಿತಾ ಮಾತನಾಡಿ, ಪಂಚಾಯತ್ ಸಿಬ್ಬಂದಿ ಸೂರಪ್ಪ ಅವರು ಸರ್ಕಾರಿ ಜಮೀನಿನಲ್ಲಿ ಹಿಂದೆ ಕಟ್ಟಡ ನಿರ್ಮಿಸಿರುವ ಬಗ್ಗೆ ಮಾಹಿತಿ ಇದೆ. ಇದೀಗ ಅದನ್ನು ರಾಜು ಮೇಸ್ತ್ರಿ ಎಂಬವರು ತಮ್ಮ ಮಗಳಿಗಾಗಿ ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದರು.ಈ ವೇಳೆ ರಾಜು ಮೇಸ್ತ್ರಿ ಅವರ ಪುತ್ರ ಹಾಗೂ ಮಾಜಿ ಉಪಾಧ್ಯಕ್ಷ ಗಣೇಶ್ ಮಾತನಾಡಿ, ಸೂರಪ್ಪ ಅವರಿಗೆ ಮನೆ ನಿರ್ಮಿಸಿಕೊಡಲಾಗುತ್ತಿದ್ದು, ಕಾಮಗಾರಿಯನ್ನು ತಮ್ಮ ಕುಟುಂಬದವರು ಮಾಡುತ್ತಿದ್ದಾರೆ. ಮನೆ ತಮ್ಮ ಕುಟುಂಬಕ್ಕೆ ಅಲ್ಲ ಎಂದು ಹೇಳಿದರು. ಇದಕ್ಕೆ ಪ್ರಸಾದ್ ಶೆಟ್ಟಿ ಹಾಗೂ ಪ್ರತೀಕ್ ಕೋಟ್ಯಾನ್ ಆಕ್ಷೇಪ ವ್ಯಕ್ತಪಡಿಸಿ, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಅಲ್ಲಿದ್ದೆವು. ಆಗ ಸೂರಪ್ಪ ಅವರು ತಾವು ಮನೆ ನಿರ್ಮಿಸುತ್ತಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಮನೆ ತನಗಾಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿರುವ ವಿಡಿಯೋ ತಮ್ಮ ಬಳಿ ಇದೆ ಎಂದು ಹೇಳಿದರು. ಸಾರ್ವಜನಿಕರ ಒತ್ತಾಯದ ಬಳಿಕ ಮಾತನಾಡಿದ ಸೂರಪ್ಪ, “ನಾನು ನೇತಾಜಿ ಬಡಾವಣೆಯ ಸಮೀಪ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸುತ್ತಿದ್ದೇನೆ. ನನಗೆ ಕಂದಾಯ ಇಲಾಖೆ ಹಾಗೂ ಪಂಚಾಯತ್ ಆಡಳಿತ ವಿನಾಕಾರಣ ತೊಂದರೆ ನೀಡುತ್ತಿದೆ” ಎಂದು ಸಭೆಯಲ್ಲಿ ಹೇಳಿದರು.ಇದರಿಂದ ಸಭೆಯಲ್ಲಿ ಕೆಲಕಾಲ ಆರೋಪ–ಪ್ರತ್ಯಾರೋಪಗಳು ನಡೆದವು. ಬಳಿಕ ಆಡಳಿತಾಧಿಕಾರಿ ರಾಜೇಂದ್ರ ಕೃಷ್ಣ ಅವರು, ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣದ ಪ್ರಕರಣ ತಹಶೀಲ್ದಾರ್ ಅವರ ಗಮನಕ್ಕೆ ಬಂದಿರುವುದರಿಂದ ಮುಂದಿನ ಕ್ರಮವನ್ನು ತಹಶೀಲ್ದಾರ್ ಅವರೇ ಕೈಗೊಳ್ಳಲಿದ್ದಾರೆ ಎಂದು ತಿಳಿಸಿ ಚರ್ಚೆಗೆ ತೆರೆ ಎಳೆದರು.

ಪ್ರಸನ್ನ ಎಜುಕೇಷನ್ ಟ್ರಸ್ಟ್ ವಿರುದ್ಧ ಅವ್ಯಹಾರದ ಆರೋಪ: ಜಂಟಿ ತನಿಖೆಗೆ ಸೂಚನೆ:

ಮಾಜಿ ಕಾಂಗ್ರೆಸ್ ಸಚಿವ ಗಂಗಾಧರ ಗೌಡ ಅಧ್ಯಕ್ಷರಾಗಿರುವ ಪ್ರಸನ್ನ ಎಜುಕೇಷನ್ ಟ್ರಸ್ಟ್‌ನ ಆಯುರ್ವೇದ ಆಸ್ಪತ್ರೆಯ ತ್ಯಾಜ್ಯಗಳನ್ನು ನಿಯಮಬಾಹಿರವಾಗಿ ವಿಲೇವಾರಿ ಮಾಡಲಾಗುತ್ತಿದೆ ಅದಲ್ಲದೆ ಪ್ರಸನ್ನ ಎಜುಕೇಶನ್ ಟ್ರಸ್ಟ್ ಆಡಳಿತ ಮಂಡಳಿ ಹಲವು ವರ್ಷಗಳಿಂದ ಅಕ್ರಮ ಅವ್ಯವಹಾರಗಳನ್ನು ಮಾಡಿದ್ರೂ ಎಷ್ಟು ದೂರನ್ನು ಸ್ಥಳೀಯರು ನೀಡಿದ್ರೂ ಈವರೆಗೂ ಕ್ರಮ ಕೈಗೊಂಡಿಲ್ಲ ಅದರ ಅಧ್ಯಕ್ಷರಾದ ಗಂಗಾಧರ ಗೌಡ ಮಾಜಿ ಸಚಿವರು , ಅದಲ್ಲದೆ ಹಿರಿಯ ಕಾಂಗ್ರೆಸ್ ಮುಖಂಡ ಎಂದು ಅಧಿಕಾರಿಗಳಿಗೆ ಅವರ ವಿರುದ್ಧ ಈವರೆಗೆ ಕ್ರಮ ಕೈಗೊಳ್ಳಲು ಭಯವೇ ಎಂದು ಪ್ರತೀಕ್ ಕೋಟ್ಯಾನ್ ಪ್ರಶ್ನೆ ಮಾಡಿ ಆರೋಪಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿಯೊಬ್ಬರು ಮಾತನಾಡಿ, ಸಾರ್ವಜನಿಕ ದೂರಿನ ಆಧಾರದ ಮೇಲೆ ತನಿಖೆಗೆ ತೆರಳಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೇಷ್ಮಾ ಅವರು ಅನುಮತಿ ಇಲ್ಲದೆ ಆಸ್ಪತ್ರೆಯ ಕಾಂಪೌಂಡ್ ಒಳಗೆ ಹೇಗೆ ಬಂದಿರಿ ಎಂದು ಪ್ರಶ್ನಿಸಿ ಹೊರಗೆ ಹೋಗುವಂತೆ ಹೇಳಿದ್ದರು ಎಂದು ಸಭೆಯಲ್ಲಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಸ್ಥಳೀಯ ಕಕ್ಕೆನಾ ನಿವಾಸಿ ಮಮತಾ ಮಾತನಾಡಿ, ಸರ್ಕಾರಿ ನಿವೇಶನದ ಕೆಳಭಾಗದಲ್ಲಿ ಜೆಸಿಬಿ ಮೂಲಕ ಕೆಲಸ ನಡೆಸಲಾಗುತ್ತಿದ್ದು, ಇದರಿಂದ ತಮ್ಮ ಮನೆ ಬೀಳುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದರು. ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.ಮಣ್ಣು ತೆಗೆದಿರುವುದರಿಂದ, ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೂ ಪರಿಹಾರ ಈವರೆಗೂ ದೊರೆತಿಲ್ಲ ಎಂದು ಪ್ರತೀಕ್ ಕೋಟ್ಯಾನ್ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪ್ರಸನ್ನ ಎಜುಕೇಷನ್ ಟ್ರಸ್ಟ್‌ಗೆ 9 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವುದು ಸರಿಯಲ್ಲ. ಸರ್ಕಾರಿ ಜಮೀನನ್ನು ನಿವೇಶನ ರಹಿತರು ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕು ಎಂದು ಶೇಖರ್ ಲಾಯಿಲ ಒತ್ತಾಯಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಆರೋಗ್ಯ, ಕಂದಾಯ, ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತನಿಖೆ ನಡೆಸುವಂತೆ ನೋಡೆಲ್ ಅಧಿಕಾರಿ ಸೂಚಿಸಿದರು.

ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಆಗ್ರಹ:

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಕಾನೂನುಬಾಹಿರವಾಗಿ ಅನುಮತಿ ನೀಡುತ್ತಿರುವ ಕುರಿತು ಗ್ರಾಮಸ್ಥರಾದ ಸುರೇಶ್ ಬೈರ, ಪ್ರತೀಕ್ ಕೋಟ್ಯಾನ್ ಹಾಗೂ ಅನ್ಸಾರ್ ಪ್ರಶ್ನಿಸಿದರು. ಪಂಚಾಯತ್ ಮುಂದೆಯೆ ಮೊಹಮದ್ ಸಾಧಿಕ್ ಎಂಬವರು ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ಎರಡು ಬಾರಿ ನೋಟಿಸ್ ನೀಡಿದ ಬಳಿಕವೂ ಕಾಮಗಾರಿ ಮುಂದುವರಿಯುತ್ತಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ನೋಡೆಲ್ ಅಧಿಕಾರಿ ಪಿಡಿಓ ಅವರಿಗೆ ಸೂಚಿಸಿದರು.

ಆದರ್ಶನಗರ ರಸ್ತೆ, ಮರ ತೆರವು ವಿಚಾರದಲ್ಲಿ ಆರೋಪ–ಪ್ರತ್ಯಾರೋಪ:

ಆದರ್ಶನಗರದ ರಸ್ತೆ ಹಾಗೂ ಮರ ತೆರವು ವಿಚಾರವೂ ಗ್ರಾಮಸಭೆಯಲ್ಲಿ ಚರ್ಚೆಗೆ ಬಂತು. ಈ ವೇಳೆ ವೈಯಕ್ತಿಕ ಆರೋಪ–ಪ್ರತ್ಯಾರೋಪಗಳು ನಡೆದವು.ಮಧ್ಯಪ್ರವೇಶಿಸಿದ ಆಡಳಿತಾಧಿಕಾರಿ, ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಪ್ರಕರಣ ಇತ್ಯರ್ಥವಾದ ಬಳಿಕ ಗ್ರಾಮ ಪಂಚಾಯತ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಯನ್ನು ಬಗೆಹರಿಸುವ ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.

ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ:

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರೊಬ್ಬರು ಸಭೆಯಲ್ಲಿ ಗಮನ ಸೆಳೆದರು.ಮಾಜಿ ಸದಸ್ಯ ಮಹೇಶ್ ಮಾತನಾಡಿ, ಮಂಗಳೂರಿನ ಎನ್‌ಜಿಒಗಳ ಸಹಕಾರದೊಂದಿಗೆ ಬೀದಿನಾಯಿಗಳ ಸ್ಥಳಾಂತರ ಸೇರಿದಂತೆ ಸಮಸ್ಯೆ ನಿಯಂತ್ರಿಸುವ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ಬೀದಿನಾಯಿಗಳ ಸಂತಾನಶಸ್ತ್ರಚಿಕಿತ್ಸೆ ನಡೆಸುವಂತೆ ಪಶುಸಂಗೋಪನಾ ಇಲಾಖೆಗೆ ತಿಳಿಸಲಾಗುವುದು ಎಂದು ಹೇಳಿದರು.

ಸತತ ಆರು ಗಂಟೆಗಳ ಕಾಲ ನಡೆದ ಗ್ರಾಮಸಭೆ:

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು. ನಿವೇಶನ, ಸರ್ಕಾರಿ ಜಮೀನು, ಕಟ್ಟಡ ಕಾಮಗಾರಿ, ಅನಧಿಕೃತ ಕಟ್ಟಡಗಳು, ರಸ್ತೆ, ಗಣಿಗಾರಿಕೆ, ಸಾರ್ವಜನಿಕ ಸುರಕ್ಷತೆ ಹಾಗೂ ಬೀದಿನಾಯಿಗಳ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಗ್ರಾಮಸ್ಥರು ಗಂಭೀರ ಚರ್ಚೆ ನಡೆಸಿದರು. ಬೆಳಗ್ಗೆ 10.45ಕ್ಕೆ ಆರಂಭವಾದ ಗ್ರಾಮಸಭೆ ಸಂಜೆ 4.30ಕ್ಕೆ ಮುಕ್ತಾಯಗೊಂಡಿತು.ಆರಂಭದಲ್ಲಿ ಸಹಾಯಕ ಲೆಕ್ಕಾಧಿಕಾರಿ ಸುಪ್ರೀತಾ ಶೆಟ್ಟಿ ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು. ಪಂಚಾಯತ್ ಸಿಬ್ಬಂದಿ ಮೋಹನ್ ವಾರ್ಡ್ ಸಭೆಯ ವರದಿ ಮಂಡಿಸಿದರು. ಕೊನೆಯಲ್ಲಿ ಸಹಾಯಕ ಲೆಕ್ಕಾಧಿಕಾರಿ ಸುಪ್ರೀತಾ ಶೆಟ್ಟಿ ವಂದಿಸಿದರು.

Spread the love
  • Related Posts

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    ಗುರುವಾಯನಕೆರೆ: ರಾಷ್ಟ್ರಮಟ್ಟದಲ್ಲಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ (COA) ನಡೆಸುವ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (NATA) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಕಾಲೇಜಿನ 73 ವಿದ್ಯಾರ್ಥಿಗಳೂ…

    Spread the love

    “ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

    🖊️• ವರದಿ: ರಾಜೇಶ್ ಎಂ ಕಾನರ್ಪ ಗ್ರಾಮೀಣ ಮಕ್ಕಳ ನಿತ್ಯದ ನರಕಯಾತನೆಗೆ ಕೊನೆಯೆಲ್ಲಿ? ಮಳೆ ಸುರಿಯುತ್ತಿದೆ, ರಸ್ತೆ ಒದ್ದೆಯಾಗಿದೆ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇಂತಹ ರಸ್ತೆಯಲ್ಲಿ ಪ್ರತಿದಿನ ಶಾಲೆಗೆ ಹೋಗುವ ಗ್ರಾಮೀಣ ಮಕ್ಕಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಒಮ್ಮೆಯಾದರೂ ಯೋಚಿಸಿದ್ದೇವೆಯೇ? “ಪ್ರಾಣಿಗಳ…

    Spread the love

    You Missed

    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    • By admin
    • August 31, 2026
    • 2 views
    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    • By admin
    • August 27, 2026
    • 5 views
    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    “ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

    • By admin
    • August 27, 2026
    • 7 views
    “ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

    ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ವಿಶೇಷ ಸಭೆ

    • By admin
    • August 25, 2026
    • 7 views
    ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ವಿಶೇಷ ಸಭೆ

    “ಆರ್ಥಿಕ, ಸಾಮಾಜಿಕ ಹಾಗೂ ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ತರ ಸಾಧನೆ” “ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ಒಕ್ಕೂಟಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಿ” : ಡಾ. ನವೀನ್ ಚಂದ್ರ ಶೆಟ್ಟಿ

    • By admin
    • August 25, 2026
    • 7 views
    “ಆರ್ಥಿಕ, ಸಾಮಾಜಿಕ ಹಾಗೂ ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ತರ ಸಾಧನೆ” “ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ಒಕ್ಕೂಟಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಿ” : ಡಾ. ನವೀನ್ ಚಂದ್ರ ಶೆಟ್ಟಿ

    ಧರ್ಮಸ್ಥಳದ ಶೌರ್ಯ ಪಡೆಗೆ NDRF ತರಬೇತಿ: ವಿಪತ್ತು ನಿರ್ವಹಣೆಯಲ್ಲಿ ಸಮಾಜಸೇವೆಗೆ ಸಜ್ಜು, ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಸೇವೆ ಶ್ಲಾಘನೀಯ: ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ

    • By admin
    • August 24, 2026
    • 11 views
    ಧರ್ಮಸ್ಥಳದ ಶೌರ್ಯ ಪಡೆಗೆ NDRF ತರಬೇತಿ: ವಿಪತ್ತು ನಿರ್ವಹಣೆಯಲ್ಲಿ ಸಮಾಜಸೇವೆಗೆ ಸಜ್ಜು, ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಸೇವೆ ಶ್ಲಾಘನೀಯ: ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ