ಹೊಸದಿಲ್ಲಿ : ಬಲವಂತದ ಮತಾಂತರದ ನಡೆದಿದೆ ಎಂದು ಕಂಡು ಬಂದರೆ ಮದುವೆಯನ್ನು ರದ್ದುಗೊಳಿಸಲು ಉದ್ದೇಶಿತ ಕಾನೂನಿನ ಕರಡನ್ನು ಉತ್ತರ ಪ್ರದೇಶ ಸರಕಾರವು ಸಿದ್ಧಪಡಿಸಿದೆ.
ಕರಡು ‘ಅಕ್ರಮ ಮತಾಂತರ ನಿಷೇಧ ಮಸೂದೆ 2020’ಲವ್ ಜಿಹಾದ್ ಅಥವಾ ಬಿಜೆಪಿ ನಾಯಕರು ಆಗಾಗ್ಗೆ ಹೇಳುವಂತೆ ಪ್ರೇಮ ಮತ್ತು ವಿವಾಹದ ಸೋಗಿನಲ್ಲಿ ಹಿಂದು ಮಹಿಳೆಯರನ್ನು ಇಸ್ಲಾಮ್‌ಗೆ ಮತಾಂತರಗೊಳಿಸುವ ‘ಒಳಸಂಚ ’ನ್ನು ಮಟ್ಟಹಾಕುವ ಉದ್ದೇಶವನ್ನು ಹೊಂದಿದೆ. ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶ ಮತ್ತು ಕನಿಷ್ಠ ಮೂರು ಇತರ ಬಿಜೆಪಿ ಆಡಳಿತದ ರಾಜ್ಯಗಳು ಲವ್‌ಜಿಹಾದ್ ವಿರುದ್ಧ ಕಾನೂನನ್ನು ತರುವ ಭರವಸೆಯನ್ನು ನೀಡಿದ್ದವು.
ಕರಡು ಕಾನೂನನ್ನು ರೂಪಿಸಿರುವ ರಾಜ್ಯದ ಗೃಹ ಇಲಾಖೆಯು ಅದನ್ನು ಕಾನೂನು ಇಲಾಖೆಗೆ ಸಲ್ಲಿಸಿದೆ. ನೂತನ ಮಸೂದೆಯು ಶೀಘ್ರವೇ ರಾಜ್ಯ ಸಂಪುಟದ ಮುಂದೆ ಮಂಡನೆಯಾಗಲಿದೆ ಎಂದು ಹೇಳಲಾಗಿದೆ.
ಮದುವೆಯ ಮೂಲಕ ಸೇರಿದಂತೆ ಬಲವಂತದ ಮತಾಂತರಕ್ಕೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ.ದಂಡವನ್ನು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆಯೋರ್ವಳು ಮದುವೆಗೆಂದೇ ಮತಾಂತರಗೊಂಡಿದ್ದರೆ ಮತ್ತು ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ತನಿಖೆ ನಡೆಸಬೇಕಾಗುತ್ತದೆ. ಕಪಟದಿಂದ ಮತಾಂತರಗೊಳಿಸಿರುವುದು ತನಿಖೆಯಲ್ಲಿ ಕಂಡು ಬಂದರೆ ಮದುವೆಯನ್ನು ರದ್ದುಗೊಳಿಸಲಾಗುತ್ತದೆ. ಸಾಮೂಹಿಕ ಮತಾಂತರಕ್ಕೆ 10 ವರ್ಷಗಳ ಜೈಲು ಶಿಕ್ಷೆಯನ್ನೂ ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಮಸೂದೆಯಡಿ ಮತಾಂತರ ಜಾಮೀನುರಹಿತ ಅಪರಾಧವಾಗಲಿದೆ.
ನೂತನ ಕಾನೂನಿನಲ್ಲಿ ‘ಲವ್ ಜಿಹಾದ್ ’ಶಬ್ದವಿಲ್ಲದಿರುವುದನ್ನು ಪ್ರಸ್ತಾಪಿಸಿದ ಮಿತ್ತಲ್, ಮಾಧ್ಯಮಗಳು,ಸಾಮಾಜಿಕ ಜಾಲತಾಣಗಳು ಮತ್ತು ರಾಜಕಾರಣಿಗಳಿಂದ ಮಾತ್ರ ಈ ಶಬ್ದ ಬಳಕೆಯಾಗುತ್ತಿದೆ. ನೂತನ ಮಸೂದೆಯು ‘ಹಿಂದು-ಮುಸ್ಲಿಂ’ನೆಲೆಯಲ್ಲಿ ಮಾತ್ರ ಧಾರ್ಮಿಕ ಮತಾಂತರಗಳನ್ನು ಪರಿಗಣಿಸುವುದಿಲ್ಲ,ಅದು ಎಲ್ಲ ಧರ್ಮಗಳಿಗೂ ಅನ್ವಯವಾಗಲಿದೆ ಎಂದು ವಿವರಿಸಿದರು.
ಉದ್ದೇಶಿತ ಕಾನೂನಿನಲ್ಲಿ ಅಂತರ್ ಧರ್ಮೀಯ ವಿವಾಹಗಳಿಗೆ ನಿರ್ಬಂಧವಿಲ್ಲ. ಬಲವಂತದ, ಆಮಿಷವೊಡ್ಡುವ ಅಥವಾ ಮದುವೆಗಳ ಮೂಲಕ ಮತಾಂತರವನ್ನು ಅಪರಾಧವನ್ನಾಗಿಸುವುದು ಮಾತ್ರ ಕಾನೂನಿನ ಉದ್ದೇಶವಾಗಿದೆ. ಈ ಕಾನೂನಿನಡಿ ಧಾರ್ಮಿಕ ಮತಾಂತರಕ್ಕೆ ಅವಕಾಶವಿದೆ,ಆದರೆ ಬಲವಂತದ ಅಥವಾ ಆಮಿಷದ ಮೂಲಕ ಮತಾಂತರಕ್ಕೆ ಅವಕಾಶವಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಆದಿತ್ಯ ಮಿತ್ತಲ್ ತಿಳಿಸಿದರು.