ಮಂಗಳೂರು ಪೊಲೀಸರೇ, ನೀವು ಲಿಫ್ಟ್ ಮಾಡಬೇಕಿರುವುದು ವಾಹನಗಳನ್ನಲ್ಲ, ಪಾರ್ಕಿಂಗ್ ಜಾಗ ಬಾಡಿಗೆಗೆ ಬಿಟ್ಟಿರೋ ಕಟ್ಟಡದ ಮಾಲಕರನ್ನು…!

🖊️ಭರತ್ ರಾಜ್

ನಿಮಗೆಲ್ಲಾ ಮಂಗಳೂರಿನ ಬಲ್ಮಠದಲ್ಲಿರೋ ಇಂದ್ರ ಭವನ ಅನ್ನೋ ಹೊಟೇಲ್ ಬಗ್ಗೆ ಗೊತ್ತಿದೆ ಅಂದುಕೊಳ್ತೀನಿ. ಬಜೆಟ್ ಹಣಕ್ಕೆ ಚಾ, ತಿಂಡಿ ತಿನ್ನೋಕೆ ಮತ್ತು ಕೊಂಚ ಹರಟೆ ಹೊಡೆದು ಚರ್ಚಿಸೋಕೆ ಹೇಳಿ ಮಾಡಿಸಿದ ಜಾಗ. ಆದ್ರೆ ಚಿಲ್ಲರೆ ಹಣದಲ್ಲಿ ಕಾಫಿ ತಿಂಡಿ ಕುಡಿಯೋಕೆ ಬರೋ ಗ್ರಾಹಕರು ಕಳೆದೊಂದು ತಿಂಗಳಿನಿಂದ ಸಾವಿರಾರು ರೂ. ಹಣವನ್ನ ಪೊಲೀಸರಿಗೆ ದಂಡದ ರೂಪದಲ್ಲಿ ಕಟ್ಟುತ್ತಿದ್ದಾರೆ.

ನೋ ಪಾರ್ಕಿಂಗ್ ಹೆಸರಲ್ಲಿ ಬೈಕ್ ಗಳನ್ನ ಲಿಫ್ಟ್ ಮಾಡಲಾಗುತ್ತಿದೆ. ಇರಲಿ ಬಿಡಿ, ಪೊಲೀಸರು ಅದ್ಯಾರದ್ದೋ ದೂರಿಗೆ ಸ್ಪಂದಿಸಿ ಬೆಳಿಗ್ಗಿನಿಂದ ಸಂಜೆಯವರೆಗೂ ಈ ಜಾಗದಲ್ಲಿ ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸ್ತಿದ್ದಾರೆ ಅನ್ನೋಣ. ಆದ್ರೆ ವಿಷ್ಯ ಇರೋದು, ಪೊಲೀಸರು ಕಳೆದೊಂದು ತಿಂಗಳಿನಿಂದ ಇಲ್ಲಿ ಬೈಕ್ ಗಳನ್ನು ಎತ್ತಾಕಿಗೊಂಡು ಹೋಗ್ತಾ ಇದ್ರೂ ಮತ್ತೆ ಮತ್ತೆ ಈ ಜಾಗದಲ್ಲಿ ಬೈಕ್ ಗಳು ಬಂದು ನಿಲ್ಲುತ್ತಲೇ ಇವೆ. ಇದಕ್ಕೆ ಕಾರಣ ಇಂದ್ರ ಭವನ ಹೊಟೇಲ್ ನ ಕಾಫಿ ಹೀರೋಕೆ ಬರೋ ಗ್ರಾಹಕರಿಗೆ ಈ ಭಾಗದಲ್ಲಿ ಮತ್ಯಾವ ಜಾಗದಲ್ಲೂ ಪಾರ್ಕಿಂಗ್ ಇಲ್ಲದೇ ಇರೋದು.

ಅಲ್ಲಿಗೆ ನಿಜವಾದ ಸಮಸ್ಯೆ ಇರೋದು ಹೊಟೇಲ್ ಗೆ ಬರೋ ಗ್ರಾಹಕನಲ್ಲಂತೂ ಅಲ್ಲವೇ ಅಲ್ಲ, ಸಮಸ್ಯೆ ಇರೋದು ಪಾರ್ಕಿಂಗ್ ಜಾಗ ಮೀಸಲಿಡದ ಹೊಟೇಲ್ ನವರದ್ದು. ಅಂದ್ರೆ ಈ ಹೊಟೇಲ್ ಇರೋದು ದ್ವಾರಕ ಅನ್ನೋ ಕಾಂಪ್ಲೆಕ್ಸ್ ‌ನಲ್ಲಿ. ಅಸಲಿಗೆ ಕಟ್ಟಡದ ಬೇಸ್ ಮೆಂಟ್ ಜಾಗವನ್ನ ವಾಹನಗಳ ಪಾರ್ಕಿಂಗ್ ಗೆ ಮೀಸಲಿಡಬೇಕಾದ ಕಟ್ಟಡದ ಮಾಲೀಕ ಅದನ್ನೂ ಹಣದಾಸೆಗೆ ಬಾಡಿಗೆಗೆ ಕೊಟ್ಟಿದ್ದಾರೆ ಬಿಡಿ!.

ಆದ್ರೆ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕಾದ ಬದಲು ನೋ ಪಾರ್ಕಿಂಗ್ ಹೆಸರಿನಲ್ಲಿ ವಸೂಲಿ ನಡೆಯುತ್ತಿದೆ. ಇದು ಮಂಗಳೂರಿನ ಮಟ್ಟಿಗೆ ಕೇವಲ ಒಂದು ಉದಾಹರಣೆಯಷ್ಟೇ. ಹಾಗೆ ನೋಡಿದರೆ ಮಂಗಳೂರಿನ ಬಹುತೇಕ ಕಡೆಗಳಲ್ಲಿ ಇಂಥದ್ದೇ ಪರಿಸ್ಥಿತಿಯಿದೆ.‌ ನಗರದ ಬಹುತೇಕ ಹೊಟೇಲ್ ಗಳ ಎದುರು ವಾಹನ ಪಾರ್ಕ್ ಮಾಡೋಕೆ ಜಾಗವೇ ಇಲ್ಲ. ಇರೋ ನೆಲ ಮಹಡಿಯ ಜಾಗಗಳನ್ನೂ ಪಾರ್ಕಿಂಗ್ ಬದಲು ಬಾಡಿಗೆಗೆ ಬಿಟ್ಟಿದ್ದಾರೆ ಮಾಲೀಕರು. ಹೀಗಿರುವಾಗ ಅ ಕಟ್ಟಡಕ್ಕೆ ಬರೋ ಗ್ರಾಹಕ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸೋದು ಅನಿವಾರ್ಯವೇ ಬಿಡಿ. ಇನ್ನು ಇಂಥದ್ದಕ್ಕೆ ದಂಡ ಹಾಕೋಕೆ ನಿಂತ್ರೆ ಮಂಗಳೂರು ಪೊಲೀಸರ ಆದಾಯ‌ ಅಬಕಾರಿ ಇಲಾಖೆಯ ಆದಾಯವನ್ನೂ ಮೀರಿಸದೇ ಇರದು. ಅಸಲಿಗೆ ಮಂಗಳೂರು ನಗರದ ಈ ಹಿಂದಿನ ಇಬ್ಬರು ಪೊಲೀಸ್ ಆಯುಕ್ತರು ಇದೇ ಕಾರಣಕ್ಕೆ ನಗರದಲ್ಲಿ ಪಾರ್ಕಿಂಗ್ ಜಾಗ ಅತಿಕ್ರಮಿಸಿರೋ ಕಟ್ಟಡಗಳ ಲಿಸ್ಟ್ ಮಾಡಿದ್ದರು. ಅದನ್ನ ಮಂಗಳೂರು ಮಹಾನಗರ ಪಾಲಿಕೆಗೆ ಕೊಟ್ಟು ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದರು. ಆದ್ರೆ ಪೊಲೀಸ್ ಕಮಿಷನರ್ ಗಳು ಬದಲಾದ್ರೆ ವಿನಃ ಮಂಗಳೂರು ಪಾಲಿಕೆ ಮಾತ್ರ ಅಂಥದ್ದೊಂದು ಗಂಡಸ್ತನ ತೋರುವ ಕೆಲಸ ಮಾಡಲೇ ಇಲ್ಲ.

ಈ ಮಧ್ಯೆ ಕೆಲ ಕಟ್ಟಡ ಮಾಲೀಕರು ಕೋರ್ಟ್ ಗೆ ಹೋಗಿದ್ದಾರೆ ಅಂತೆಲ್ಲಾ ರಾಗ ಬದಲಿಸಿದ್ದು ಬಿಟ್ರೆ ನ್ಯಾಯಾಲಯದ ಎದುರು ವಾಸ್ತವತೆ ಬಿಚ್ಚಿಡೋ ಪ್ರತಿವಾದವನ್ನೂ ಪಾಲಿಕೆ ಆಡಳಿತ ಮಾಡಿದಂತೆ ತೋರುತ್ತಿಲ್ಲ. ಪರಿಣಾಮ ಇಂದಿಗೂ ನಗರದಲ್ಲಿರೋ ಬಹುತೇಕ ಎಲ್ಲಾ ಕಟ್ಟಡಗಳ ಪಾರ್ಕಿಂಗ್ ಜಾಗಗಳು ಬಾಡಿಗೆ ಹೆಸರಲ್ಲಿ ಮಾಲೀಕರ ಜೇಬು ತುಂಬಿಸುತ್ತಿವೆ. ಅ ಕಟ್ಟಡಕ್ಕೆ ಅಗತ್ಯ ಕೆಲಸಕ್ಕೆ ಅಂತ ಬರೋ ಗ್ರಾಹಕರು ರಸ್ತೆಯಲ್ಲೋ ಇನ್ನೆಲ್ಲೋ ವಾಹನವಿಟ್ಟು ಪೊಲೀಸರಿಗೆ ದಂಡ ತೆರುವಂತಾಗಿದೆ. ಇನ್ನು ನಮ್ಮ‌ ಪೊಲೀಸರಿಗಂತೂ ಹೀಗೆ ಸಿಗೋ ಬೈಕ್ ಗಳನ್ನ ಎತ್ತಾಕಿಕೊಂಡು ಹೋಗೋದೇ ಅಪ್ಪಟ ಕರ್ತವ್ಯ ನಿಷ್ಠೆ…! ಅದರ ಬದಲು ಎತ್ತಿಕೊಂಡು ಹೋದ ಜಾಗದಲ್ಲಿ ಮತ್ತೆ ಮತ್ತೆ ವಾಹನಗಳನ್ನು ಪಾರ್ಕ್ ಯಾಕೆ ಮಾಡ್ತಾರೆ ಮತ್ತು ಅದಕ್ಕೆ ಪರಿಹಾರ ಏನು ಅನ್ನೋದ್ರ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕಿದೆ.

ಇದರ ಜೊತೆಗೆ ಹಿಂದಿನ ಪೊಲೀಸ್ ಕಮಿಷನರ್ ಗಳು ಕೊಟ್ಟಿರೋ‌ ಪಾರ್ಕಿಂಗ್ ಅತಿಕ್ರಮಿಸಿರೋ ಕಟ್ಟಡಗಳ ಲಿಸ್ಟ್ ತೆಗೆದು ಪಾಲಿಕೆ ಅಧಿಕಾರಿಗಳು ‌ಫೀಲ್ಡಿಗಿಳಿಯಲಿ. ಅಂಥ ಅತಿಕ್ರಮಣ ತೆರವು ಮಾಡೋ ಕೊಂಚ ಧೈರ್ಯ ತೋರುವ ಕೆಲಸವಾದರೂ ಆಗಲಿ. ಆಗ ಮಾತ್ರ ಮಂಗಳೂರಿನ ಪಾರ್ಕಿಂಗ್ ಸಮಸ್ಯೆಗೆ ಸಂಪೂರ್ಣ ಅಲ್ಲದೇ ಇದ್ದರೂ ಅರ್ಧದಷ್ಟಾದರೂ ಪರಿಹಾರ ಸಿಗಲಿದೆ. ಸ್ಮಾರ್ಟ್ ಸಿಟಿ ಹೆಸರಲ್ಲಿ ರಸ್ತೆಗಳ ಉದ್ದ ಅಗಲ ಹೆಚ್ಚಿಸಿ ಕಾಂಕ್ರೀಟ್ ನ ಶೃಂಗಾರ ಮಾಡಿದರೆ ಸಾಲದು. ಇಷ್ಟೆಲ್ಲಾ ಮಾಡಿದರೂ ಮತ್ತೆ ಮತ್ತೆ ವಾಹನಗಳು ರಸ್ತೆಯಲ್ಲೇ ನಿಲ್ಲಬೇಕು, ಮತ್ತೆ ಮತ್ತೆ ಫೈನ್ ಕಟ್ಟಬೇಕು ಅನ್ನೋದಾದರೆ ನಿಮ್ಮ ಈ ಸ್ಮಾರ್ಟ್ ಸಿಟಿ ಯಾವ ಪುರುಷಾರ್ಥಕ್ಕೆ? ಮೊದಲು ಕಟ್ಟಡಗಳ ಅತಿಕ್ರಮ ತೆರವು ಮಾಡಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವ ಕೆಲಸ ಆಗಬೇಕಿದೆ. ಸರ್ಕಾರದ ಬೊಕ್ಕಸ ತುಂಬಿಸಲು ದಂಡದ ಹೆಸರಲ್ಲಿ ಬೈಕ್ ಚಾಲಕರ ಜೇಬಿಗೆ ಕತ್ತರಿ ಹಾಕಿದರೆ ಏನು ಫಲ? ನೂರು ರೂ. ಪೆಟ್ರೋಲ್ ಜೊತೆಗೆ ಚಿಲ್ಲರೆ ಹಣದಲ್ಲಿ ಕಾಫಿ ತಿಂಡಿ ತಿಂದು ಬದುಕೋರಿಂದ ಸಾವಿರಾರು ರೂ. ದಂಡ ಕಿತ್ತು ಸಾಧಿಸೋದಾದ್ರೂ ಏನು?

ಸದ್ಯ ಮಂಗಳೂರಿಗೆ ಹೊಸ ಪೊಲೀಸ್ ಕಮಿಷನರ್ ‌ಬಂದಿದ್ದಾರೆ. ಪಾಲಿಕೆ ಆಡಳಿತಕ್ಕೆ ನೆನಪಿಲ್ಲ ಅಂತಾದ್ರೆ ಮತ್ತೆ ಆ ಅಕ್ರಮ ಕಟ್ಟಡಗಳ ಫೈಲ್ ತೆಗೆದು ಪಾಲಿಕೆ ಅಧಿಕಾರಿಗಳ ಮುಖಕ್ಕೆ ಎಸೆಯಿರಿ. ಒತ್ತಡ ತಂದಾದ್ರೂ ಆ ಕೆಲಸ ‌ಮಾಡಿಸಿ..ಆಗ ಮಾತ್ರ ಮಂಗಳೂರು ನಿಮ್ಮಂಥವರನ್ನ ನೆನಪಿನಲ್ಲಿಟ್ಟುಕೊಳ್ಳುತ್ತೆ…ದಂಡ ಹಾಕುವುದರ ಹೊರತಾಗಿಯೂ ಇಂಥ ಸಮಸ್ಯೆಗಳಿಗೆ ಪರಿಹಾರವಿದೆ…ದಯವಿಟ್ಟು ಅದನ್ನ ಮಾಡಿ ತೋರಿಸಿ…

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 16 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 34 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 53 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 35 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 41 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 71 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ