ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಕುಟ್ಟಿಚ್ಛಾರು ಎಂಬಲ್ಲಿ ಮಹಿಳೆಯೊರ್ವರ ಕೊಲೆ ನಡೆದಿದ್ದು ಆರೋಪಿಯನ್ನು ಜಾನ್ಸನ್ ಎಂದು ಗುರುತಿಸಲಾಗಿದೆ.
ಆರೋಪಿ ಜಾನ್ಸನ್ನು ತನ್ನ ಪತ್ನಿ ಕೇರಳ ಮೂಲದ ಇರುಟ್ಟಿ ಎಂಬಲ್ಲಿಯ ಸೌಮ್ಯಾ ಜಾನ್ಸನ್ ನನ್ನು ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಸನೋಜ್ ಫ್ರಾನ್ಸಿಸ್ ಕುತ್ರೊಟ್ಟು ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
47 ವರ್ಷ ಪ್ರಾಯದ ಜಾನ್ಸನ್ ನು ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದು ಆತನ ಪತ್ನಿ ಸೌಮ್ಯಳಿಗೆ ಮರದ ತುಂಡಿನಿಂದ ಹುಬ್ಬಿನ ಜಾಗದಲ್ಲಿ ಹೊಡೆದಿದ್ದ. ಅಲ್ಲದೆ ತಲೆಯ ಹಿಂದಿನ ಭಾಗಕ್ಕೆ ಬಲವಾದ ಏಟು ಕೊಟ್ಟಿದ್ದ. ಕುಡಿದುಕೊಂಡು ಬಂದು ದಿನ ಮನೆಯಲ್ಲಿ ಜಗಳ ಕಾಯುತ್ತಿದ್ದ. ಅಲ್ಲದೆ ಆತ ಪತ್ನಿಯ ಮೇಲೆ ಸದಾ ಸಂಶಯ ಪಡುತ್ತಿದ್ದ. ನಿನ್ನೆ ರಾತ್ರಿ ಕೂಡ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ತಲೆಗೆ ಏಟು ಬಿದ್ದ ಸೌಮ್ಯ ಜಾನ್ಸನ್ ಗಳನ್ನು ಮೊದಲು ಬೆಳ್ತಂಗಡಿ ಯಲ್ಲಿ ಆಸ್ಪತ್ರೆಗೆ ತೋರಿಸಲಾಗಿತ್ತು. ಅಲ್ಲಿಂದ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಸೂಚಿಸಲಾಯಿತು. ಆದರೆ ಮಾರ್ಗಮಧ್ಯೆ ಹೋಗುವ ಮಾರ್ಗ ಮಧ್ಯದಲ್ಲಿ ಆಕೆ ಮೃತಪಟ್ಟಿದ್ದಾರೆ.
ಈ ಘಟನೆಯು ನಿನ್ನೆ ಮಧ್ಯ ರಾತ್ರಿ ನಡೆದಿದ್ದು ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ ಬಿಜಿ ಹಾಗೂ ಧರ್ಮಸ್ಥಳ ಎಸ್ಸೈ ಪವನ್ ಇವರ ತಂಡ ಘಟನೆ ನಡೆದ ಸ್ಥಳಕ್ಕೆ ಆ ಕೂಡಲೇ ಧಾವಿಸಿದ್ದರು. ಪೋಲಿಸರ ತಂಡವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮೃತ ಸೌಮ್ಯ10 ವರ್ಷ ಪ್ರಾಯದ ಮಗಳನ್ನು ಅಗಲಿದ್ದಾರೆ.