ಬೆಂಗಳೂರು: ಬ್ರಿಗೇಡ್ ರಸ್ತೆ ಸಮೀಪದಲ್ಲಿ ಆರ್.ಎಚ್.ಪಿ ರಸ್ತೆಯಲ್ಲಿರುವ ಡ್ಯೂಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ (45) ಎಂಬುವರು ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಚೆಮ್ಮನೂರ್ ಜ್ಯುವೆಲ್ಲರಿ ದರೋಡೆ ಪ್ರಕರಣ, ಎಸ್ ಬಿ ಐ ಬ್ಯಾಂಕ್ ಬೆಳಗಾಂ ದರೋಡೆ ಪ್ರಕರಣದ ಆರೋಪಿ ಮನೀಶ್ ಶೆಟ್ಟಿ ಭೂಗತ ಲೋಕದ ರವಿ ಪೂಜಾರಿಯ ಸಹಚರ.
ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಗುಂಡೇಟಿನಿಂದ ಗಾಯಗೊಂಡಿದ್ದ ಮನೀಶ್ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.
‘ಚಿಕ್ಕಮಗಳೂರಿನ ಕೊಪ್ಪದ ಮನೀಶ್ ಶೆಟ್ಟಿ, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬಾರ್ ತೆರೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ‘ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾರ್ ಮುಂಭಾಗದಲ್ಲೇ ಮನೀಶ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ಹೊರ ಬೀಳಬೇಕಾಗಿದೆ.