ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಮಣ್ಣ ಮಜಲು ಮಗ್ಗ ಎಂಬಲ್ಲಿ ಉಮ್ಮರ್ ಫಾರೂಕ್ ಎಂಬವರ ಮನೆಯಲ್ಲಿ ಸಾಕುತ್ತಿದ್ದ ಒಂದು ಗಂಡು ಮತ್ತು ಒಂದು ಹೆಣ್ಣು ಆಡುಗಳನ್ನು ಇಳಂತಿಲ ಗ್ರಾಮದ ಕಡವಿನ ಗುಡ್ಡೆ ಎಂಬಲ್ಲಿ ಮೇಯಲು ಬಿಟ್ಟ ಸಮಯ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು , ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಮತ್ತು ನೆರೆ ಕರೆಯಲ್ಲಿ ವಿಚಾರಿಸಿ ಪತ್ತೆಯಾಗದೇ ಇದ್ದುದರಿಂದ ಯಾರೋ ಕಳ್ಳರು ಈ ಎರಡು ಆಡುಗಳನ್ನು ಕಳವು ಮಾಡಿಕೊಂಡು ಹೋಗಿರುವ ಸಂಶಯ ಕಂಡು ಬಂದಿರುವುದರಿಂದ ಸದ್ರಿ ಆಡುಗಳನ್ನು ಪತ್ತೆ ಹಚ್ಚಿ ಕೊಡುವರೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಉಮ್ಮರ್ ಫಾರೂಕ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ತನಿಖೆಗಿಳಿದ ಉಪ್ಪಿನಂಗಡಿ ಪೋಲೀಸ್ ಉಪನಿರೀಕ್ಷಕರಾದ ಈರಯ್ಯ ಡಿ ಎನ್, ಪೊಲೀಸ್ ಠಾಣೆ ಸಿಬ್ಬಂದಿಗಳಾದ ಎ.ಎಸ್.ಐ ಚೋಮ, ಕುಶಾಲಪ್ಪ,ಹಿತೋಶ್ ಕುಮಾರ್, ಇರ್ಷಾದ್ ಪಿ, ರೇವಣ್ಣ, ಯೋಗೀಶ್ , ಚಂದ್ರಶೇಖರ ಪಿ. ರವರ ತಂಡ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವಾದ ಎರಡೂ ಆಡುಗಳ ಅಂದಾಜು ಮೌಲ್ಯ ರೂ . 15,000 ಆಗಬಹುದೆಂದು ಅಂದಾಜಿಸಲಾಗಿದೆ.
ಉರುವಾಲು ಗ್ರಾಮದ ಉಪ್ಪಿನಂಗಡಿ-ಬೆಳ್ತಂಗಡಿ ರಸ್ತೆಯ ಕುಪ್ಪೆಟ್ಟಿ ಹೊಳೆ ಬಳಿ ಡಾಸ್ಟನ್ ಕಾರಿನಲ್ಲಿ (KA 19- MH -9941) ಕಳ್ಳತನ ಮಾಡಿದ 02 ಆಡುಗಳನ್ನು ಸಾಗಾಟ ಮಾಡುತ್ತಿದ್ದ ಮಹಮ್ಮದ್ ಸಿನಾನ್ , ರಿಯಾಝ, ನಿಝಮುದ್ದೀನ್, ಎಂಬವರುಗಳನ್ನು ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಯುತ್ತಿದೆ.