ಬೆಳ್ತಂಗಡಿ: ತಾಲ್ಲೂಕಿನ ಮರೋಡಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಫೆ 5 ರಿಂದ 9 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.5ರಂದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. 6ರಂದು ಬೆಳಿಗ್ಗೆ ತೋರಣ ಮುಹೂರ್ತ, ಧ್ವಜಾರೋಹಣ, ಸಂಜೆ ದೊಡ್ಡ ರಂಗಪೂಜೆ, ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ, ಕುಣಿತಾ ಭಜನೆ, ಅನ್ನಸಂತರ್ಪಣೆ ನಡೆಯಲಿದೆ. ನಂತರ ಸ್ಥಳಿಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ‘ಭರಣಿ ಕೃತಿಕೆ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ 7ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೋಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ವಹಿಸಲಿದ್ದಾರೆ. ಅತಿಥಿಗಳಾಗಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ್ ಕೋಟ್ಯಾನ್ ಭಾಗವಹಿಸಲಿದ್ದಾರೆ. ನಂತರ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ ಉತ್ಸವಬಲಿ, ಮಹಾಪೂಜೆ, ಶ್ರೀಭೂತಬಲಿ, ಕವಾಟ ಬಂಧನ, ಪಟ್ಟದಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ, ಕುಣಿತ ಭಜನೆ ನಡೆಯಲಿದೆ.
ಫೆ.8 ರಂದು ಬೆಳಿಗ್ಗೆ ಆಶ್ಲೇಷ ಬಲಿ, ಮಹಾಪೂಜೆ (ತುಲಾಭಾರ ಸೇವೆ) ಚೂರ್ಣೋತ್ಸವ, ದರ್ಶನಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ಪಲ್ಲಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಯಾತ್ರಾಹೋಮ, ರಾತ್ರಿ ಧಾರ್ಮಿಕ ಸಭೆ, ಬಲಿ ಉತ್ಸವ, ಸಿರಿಗಳ ಜಾತ್ರೆ ಕುಮಾರ ದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವ ದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಃಣ, ಮಹಾಪೂಜೆ, ಸಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ-ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಭಾಗವತಿಕೆಯೊಂದಿಗೆ ಯಕ್ಷಗಾನ (ಕಾಲಮಿತಿ) ಪ್ರದರ್ಶನಗೊಳ್ಳಲಿದೆ. ಫೆ.9ರಂದು ಸಂಪ್ರೋಕ್ಷಣೆ, ಮಂಗಳಾ ಪ್ರಸಾದ ವಿತರಣೆ ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮೋಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮತ್ತು ಕಾರ್ಯದರ್ಶಿ ಜಯಂತ ಕೋಟ್ಯಾನ್ ತಿಳಿಸಿದ್ದಾರೆ.
ಮುಂದಿನ ವರ್ಷ ಬ್ರಹ್ಮಕಲಶ ಸಂಭ್ರಮ
ಮರೋಡಿ ದೇವಸ್ಥಾನವು ಆಲಡೆ ಕ್ಷೇತ್ರವಾಗಿದ್ದು, ರಾಜ್ಯದಾದ್ಯಂತ ಅಪಾರ ಭಕ್ತರ ಆರಾಧನಾ ಕೇಂದ್ರವಾಗಿದೆ. ಈ ವರ್ಷದ ವಾರ್ಷಿಕ ಆಯನ ಮತ್ತು ಸಿರಿಗಳ ಜಾತ್ರೆಯನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತದೆ. ದೇವಸ್ಥಾನವನ್ನು 2012ರಲ್ಲಿ ಜೀರ್ಣೋದ್ಧಾರ ಮಾಡಿ, ಬ್ರಹ್ಮಕಲಶ ಮಾಡಲಾಗಿದೆ. 2024ಕ್ಕೆ ಮತ್ತೆ ಬ್ರಹ್ಮಕಲಶ ಸಂಭ್ರಮ ನಡೆಯಲಿದೆ.