ಬೆಂಗಳೂರು: ರಾಜ್ಯರಾಜಕೀಯದಲ್ಲಿ ಖಾತೆ ಖ್ಯಾತೆ ಮುಂದುವರಿದಿದ್ದು ಕೆಲ ಸಚಿವರು ತಮ್ಮ ಖಾತೆ ಬದಲಿಸುವಂತೆ ಪಟ್ಟು ಹಿಡಿದರೆ ಇನ್ನೂ ಕೆಲ ಸಚಿವರು ರಾಜೀನಾಮೆ ಇಂಗಿತವನ್ನು ತೋಡಿಕೊಂಡಿದ್ದಾರೆ.
ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ಅವರು ತಾನು ಯಾವ ಸ್ಥಾನ ಕೊಟ್ಟರು ನಿಭಾಯಿಸಬಲ್ಲೆ ನಾನಾಗಿ ಯಾವತ್ತು ಸಚಿವಸ್ಥಾನದ ಆಕಾಂಕ್ಷಿಯಲ್ಲ ಬದಲಾಗಿ ಸಿ.ಎಂ ಹೇಳಿದರೆ ಶಾಸಕನಾಗಿ ಮುಂದುವರೆಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಚಿವರುಗಳಾದ ಡಾ.ಸುಧಾಕರ್ ಮತ್ತು ಮಾಧುಸ್ವಾಮಿ ತಮ್ಮ ಖಾತೆ ಬದಲಾವಣೆಗೆ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ. ತಮ್ಮಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಹಿಂಪಡೆದ ಬಗ್ಗೆ ಸುಧಾಕರ್ ಮುನಿಸಿಕೊಂಡಿದ್ದು, ಆ ಖಾತೆಯನ್ನು ಮತ್ತೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಫಲವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಲು ಸಿಎಂ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿದೆ.
ಸದ್ಯ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಮಾಧುಸ್ವಾಮಿ ಗೆ ಪ್ರವಾಸೋದ್ಯಮ ಇಲಾಖೆ ನೀಡಲು ಸಿಎಂ ಮುಂದಾಗಿದ್ದಾರೆ. ಮಾಧುಸ್ವಾಮಿಯವರು ಈ ಹಿಂದೆಯೂ ಈ ವೈದ್ಯಕೀಯ ಶಿಕ್ಷಣ ಖಾತೆಯ ಬಗ್ಗೆ ಸಂತೋಷವಾಗಿರಲಿಲ್ಲ. ಆದರೆ ಇದೀಗ ಮತ್ತೆ ಖಾತೆ ಬದಲಾವಣೆ ಮಾಡುತ್ತಿರುವ ಕಾರಣ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ಮತ್ತೆ ಖಾತೆ ಬದಲಾವಣೆಯಿಂದ ಮುನಿಸಿಕೊಂಡ ಸಚಿವ ಮಾಧುಸ್ವಾಮಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಾಧುಸ್ವಾಮಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಿಎಂ ಬಿಎಸ್ ವೈ ದೂರವಾಣಿ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ನಾಳೆ ಧ್ವಜಾರೋಹಣ ನಂತರ ಮಧ್ಯಾಹ್ನ ರಾಜಿನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.