ತುಮಕೂರು: ಕೊರೊನಾ ಎರಡನೇ ಅಲೆಯಲ್ಲಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು ಅಷ್ಟಿಷ್ಟಲ್ಲ. ಕೋವಿಡ್ ನಿಂದ ಗುಣಮುಖರಾದ ಬಹುತೇಕ ಮಕ್ಕಳಲ್ಲಿ ಹಲವು ರೋಗಗಳು ಕಂಡುಬರುತ್ತಿದ್ದು, ಇದೀಗ ಮಿಸ್ಸಿ ರೋಗಕ್ಕೆ ಪುಟಾಣಿ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಎಸ್.ಎಸ್. ಆಸ್ಪತ್ರೆಯಲ್ಲಿ ನಡೆದಿದೆ.
ತುಮಕೂರಿನ ಶಿರಾ ಮೂಲದ 5 ವರ್ಷದ ಬಾಲಕಿ ಮಿಸ್ಸಿ ರೋಗದಿಂದ ಬಳಲುತ್ತಿದ್ದಳು. ಕೆಲ ದಿನಗಳಿಂದ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.
ಈ ಕುರಿತು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದು, ಮಿಸ್ಸಿ ರೋಗದಿಂದ ಬಳಲುತ್ತಿದ್ದ ಬಾಲಕಿಗೆ ಬಹು ಅಂಗಾಂಗ ವೈಫಲ್ಯವುಂಟಾಗಿತ್ತು.
ಚಿಕಿತ್ಸೆ ಫಲಿಸದೇ ತಡ ರಾತ್ರಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಎಸ್.ಎಸ್. ಆಸ್ಪತ್ರೆಯಲ್ಲಿ ಮಿಸ್ಸಿ ರೋಗದಿಂದ ಬಳಲುತ್ತಿರುವ ಹಲವು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲ ಮಕ್ಕಳು ಗುಣಮುಖರಾಗಿದ್ದಾರೆ.