ಮಂಗಳೂರು ಲೇಡಿಗೋಷನ್‌ನಲ್ಲಿ ಅಕ್ಸಿಜನ್ ಘಟಕ ಸ್ಥಾಪನೆಗೆ ಕ್ರೆಡಾಯ್ ನೆರವು


ಮಂಗಳೂರು: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸುಮಾರು 84 ಲಕ್ಷ ರೂ. ವೆಚ್ಚದ ಆಕ್ಸಿಜನ್ ಘಟಕದ ಪೂರ್ಣ ವೆಚ್ಚವನ್ನು ಮಂಗಳೂರು ಕ್ರೆಡಾಯ್ ನೇತೃತ್ವದಲ್ಲಿ ಭರಿಸಲು ಉದ್ದೇಶಿಸಿದ್ದು, ಇಂದು 41.86 ಲಕ್ಷ ರೂ. ಮೊತ್ತದ ಚೆಕ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಗುರುವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟಕದ ಶೇ. 50ರಷ್ಟು ಮೊತ್ತದ ಚೆಕ್ ಅನ್ನು ಮುಂಗಡವಾಗಿ ಕ್ರೆಡಾಯ್ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರ ಸಮಕ್ಷಮದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.

READ ALSO

ಕೋವಿಡ್ 19 ವೈರಸ್‌ನಿಂದ ದೇಶದಲ್ಲಿ ಅಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಹಲವು ಮಂದಿಯ ಸಾವಿಗೂ ಅಕ್ಸಿಜನ್ ಕೊರತೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಸಿಜನ್ ಘಟಕ ತೆರೆಯಲು ಸರಕಾರವೂ ಯೋಜನೆ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಾಕಲು ಉದ್ದೇಶಿಸಿದ ಅಕ್ಸಿಜನ್ ಘಟಕದ ಮೊತ್ತದ ಜವಾಬ್ದಾರಿಯನ್ನು ಕ್ರೆಡಾಯ್ ಮಂಗಳೂರು ಘಟಕ ತೆಗೆದುಕೊಂಡಿದೆ. ಶೇ.50ರಷ್ಟು ಮೊತ್ತವನ್ನು ಇಂದು ಪಾವತಿಸಿದರೆ, ಬಾಕಿ ಉಳಿದ ಶೇ. 50ರಷ್ಟು ಮೊತ್ತವನ್ನು ತಿಂಗಳಿನೊಳಗೆ ಹಸ್ತಾಂತರಿಸಲಾಗುವುದು ಎಂದು ಪುಷ್ಪರಾಜ್ ಜೈನ್‌ಹೇಳಿದರು.

ಕ್ರೆಡಾಯ್ ನೇತೃತ್ವದ ಈ ಯೋಜನೆಗೆ ಕೆನರಾ ಚೇಂಬರ್ ಆಫ್ ಕಾಮರ್ಸ್ 15 ಲಕ್ಷ ರೂ., ಮಂಗಳೂರಿನ ನಿರ್ಮಾಣಕಾರರ ಅಸೋಸಿಯೇಷನ್ 15 ಲಕ್ಷ ರೂ., ಅಸೋಸಿಯೇಷನ್ ಆಫ್ ಕನ್‌ಸಲ್ಟಿಂಗ್ ಸಿವಿಲ್ ಎಂಜಿನಿಯರ‍್ಸ್ ಮಂಗಳೂರು ಘಟಕ ವತಿಯಿಂದ 8 ಲಕ್ಷ ರೂ. ನೀಡಿದೆ. ಬಾಕಿ ಉಳಿದ ಮೊತ್ತವನ್ನು ಕ್ರೆಡಾಯ್ ಭರಿಸಲಿದೆ ಎಂದು ಪುಷ್ಪರಾಜ್ ತಿಳಿಸಿದರು.

ಮೇ. ಸುಮ್ಮಿತ್ಸ್ ಮೆಡಿಕಲ್ ಅಕ್ಸಿಜನ್ ಸಿಸ್ಟಮ್ ಸುಮಾರು 84 ಲಕ್ಷ ರೂ. ವೆಚ್ಚದಲ್ಲಿ ಲೇಡಿಗೋಷನ್‌ನಲ್ಲಿ ಅಕ್ಸಿಜನ್ ಘಟಕ ಸ್ಥಾಪಿಸಲಿದೆ.

ಕ್ರೆಡೈ ಮಂಗಳೂರು ವತಿಯಿಂದ ಕೊರೊನಾ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೋವಿಡ್ ಸಹಾಯ ಕೇಂದ್ರವನ್ನು ಆರಂಭಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಮೀನುಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಪಾಲಿಕೆ ಆಯುಕ್ತ ಅಕ್ಷಯ್, ಕ್ರೆಡಾಯ್‌ನ ಕಾರ‍್ಯದರ್ಶಿ ಪ್ರಶಾಂತ್ ಸನಿಲ್, ಕೋಶಾಧಿಕಾರಿ ಗುರುಮೂರ್ತಿ, ಕಾರ‍್ಯಕಾರಿ ಸಮಿತಿ ಸದಸ್ಯ ಜಿತೇಂದ್ರ ಕೊಟ್ಟಾರಿ, ಎಂಜಿನಿಯರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಅರುಣ ಪ್ರಭಾ, ಕಾರ‍್ಯದರ್ಶಿ ಅನಿಲ್ ಬಾಳಿಗಾ, ಕೆನರಾ ವಾಣಿಜ್ಯ ಮಂಡಳಿ ಅಧ್ಯಕ್ಷ ಐಸಾಕ್ ವಾಸ್, ಕಾರ‍್ಯದರ್ಶಿ ಶಶಿಧರ ಪೈ, ನಿರ್ಮಾಣಗಾರರ ಅಸೋಸಿಯೇಶನ್‌ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ಉಪಸ್ಥಿತರಿದ್ದರು.