ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ BSY ಇಂದಿನ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

ಬೆಂಗಳೂರು: ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಕೊವಿಡ್ 3ನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ತಮ್ಮ ಸಚಿವ ಸಂಪುಟದ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಅರವಿಂದ ಲಿಂಬಾವಳಿ, ಡಾ.ಸುಧಾಕರ್ ಅವರ ಜತೆ ರಾಜ್ಯದಲ್ಲಿ ಕೊವಿಡ್ ತಡೆ ಮತ್ತು ನಿರ್ವಹಣೆ ಕುರಿತ ಸುದ್ದಿಗೋಷ್ಠಿಯಲ್ಲಿ ಹಲವು ಮಾಹಿತಿಗಳನ್ನು ತೆರೆದಿಟ್ಟರು.

READ ALSO

18-44ವರ್ಷದೊಳಗಿನವರಿಗೆ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದೇವೆ. ಅಗತ್ಯ ಪ್ರಮಾಣದ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆದಿದ್ದೇವೆ. ರೆಮ್​ಡಿಸಿವಿರ್ ಪೂರೈಸದ ಕಂಪನಿಗಳಿಗೆ ನೋಟಿಸ್ ನೀಡಿದ್ದೇವೆ.

ಬೇರೆ ರಾಜ್ಯಗಳಲ್ಲಿ ಬಳಕೆಯಾಗದೆ ಉಳಿದ ರೆಮ್​ಡಿಸಿವಿರ್ ಪೂರೈಕೆಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು. ಕೊರೊನಾ ಹೆಚ್ಚಾಗಿದ್ದರಿಂದ ಸೋಂಕಿತರ ಜೀವ ಮುಖ್ಯ. ಸದ್ಯ ಸೋಂಕಿತರ ಜೀವ ಉಳಿಸಲು ಆದ್ಯತೆ ನೀಡುತ್ತೇವೆ. ಜನರ ಸಂಕಷ್ಟ ಅರಿತು ಮುಂದಿನ ದಿನಗಳಲ್ಲಿ ಪ್ಯಾಕೇಜ್​ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದರು.

ಕೊವಿಡ್ ವಿರುದ್ಧದ ಹೋರಾಟದಲ್ಲಿ ರಾಜ್ಯ ಮುಂದೆ
ಕೊರೊನಾ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಕೊವಿಡ್ 1ನೇ ಅಲೆ ಮತ್ತು 2ನೇ ಅಲೆ ನಡುವೆ ತಯಾರಿಗೆ 5ರಿಂದ6 ತಿಂಗಳು ಸಮಯವಿತ್ತು. ಆಗ ಸರಿಯಾದ ಸಿದ್ಧತೆ ಆಗಿರಲಿಲ್ಲ. ಆದರೆ ಈಗ ಕರ್ನಾಟಕ ದೇಶದಲ್ಲೇ ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಶೇ.50ರಷ್ಟು ಐಸಿಯು ಬೆಡ್​ಗಳಿವೆ ಇವೆ. ಈ ಮುನ್ನ ಯಾವುದೇ ತಾಲೂಕಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಇರಲಿಲ್ಲ ಎಂದು ವಿವರಿಸಿದರು.

ಪ್ರೊ.ಗಗನ್​ದೀಪ್ ಕಾಂಗ್ ನೇಮಕ; ಲಸಿಕೆ ನೀತಿ ತಯಾರಿ
ರಾಜ್ಯ ಲಸಿಕೆನೀತಿ ರೂಪಿಸಲು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ.ಗಗನ್​ದೀಪ್ ಕಾಂಗ್ ಅವರನನ್ನು ಸಲಹೆಗಾರನ್ನಾಗಿ ನೇಮಿಸಲಾಗಿದೆ. ಮುಂದಿನ 2-3 ವಾರಗಳಲ್ಲಿ ಬೆಂಗಳೂರಿನಲ್ಲಿ ಸೋಂಕು ಕಡಿಮೆ ಆಗುವ ಸಂಭವವಿದೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ, ಕೊರೊನಾ ಸೋಂಕಿತರಿಗೆ ಸೋಂಕು ದೃಢಪಟ್ಟ ತಕ್ಷಣ ಕನ್ನಡ, ಇಂಗ್ಲಿಷ್​ನಲ್ಲಿ ಮೆಸೇಜ್ ಹೋಗಲಿದೆ. ಈ ಮೊದಲು ಆಸ್ಪತ್ರೆಗೆ ದಾಖಲಿಗೆ 10 ಗಂಟೆ ಸಮಯವಿರುತ್ತಿತ್ತು. ಈ ಅವಕಾಶ ದುರ್ಬಳಕೆಯಾಗುತ್ತಿರುವುದರಿಂದ 2 ಗಂಟೆಗೆ ಇಳಿಕೆ ಮಾಡಿದ್ದೇವೆ. ಸೋಂಕಿತರಿಗೆ ಸಂದೇಶ ಬಂದ 2 ಗಂಟೆಯೊಳಗೆ ದಾಖಲಾಗಬೇಕು. ಸೋಂಕಿತರಿಗೆ ಆಕ್ಸಿಜನ್ ಬೆಡ್, ಜನರಲ್ ಬೆಡ್ ಅಥವಾ ಸಿಸಿಸಿ, ಹೀಗೆ ಎಲ್ಲಿ ಚಿಕಿತ್ಸೆ ಪಡೆಯಬೇಕೆಂದು ತಜ್ಞ ವೈದ್ಯರು ತಿಳಿಸುತ್ತಾರೆ ಎಂದು ಅವರು ತಿಳಿಸಿದರು.

ಸಿಎಂ ಯಡಿಯೂರಪ್ಪ ಅವರ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ಸೋಂಕಿತರಿಗೆ ರಾಜ್ಯ ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ರೆಮ್​ಡಿಸಿವಿರ್ ಇಂಜೆಕ್ಷನ್, ಟೆಸ್ಟಿಂಗ್ ಕಿಟ್ ಕೊರತೆ ಇಲ್ಲ. ಆಸ್ಪತ್ರೆಗಳು ಬೇಡಿಕೆ ಇಟ್ಟಂತೆ ಆಕ್ಸಿಜನ್, ರೆಮ್​ಡೆಸಿವಿರ್ ಮುಂತಾದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಇತರ ಎಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೊವಿಡ್ ತಡೆ ಅಭಿಯಾನ ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಕೆಲವು ಪ್ರಮುಖ ಅಂಶಗಳು
ರಾಜ್ಯದಲ್ಲಿ ಮೇ 5 ರಂದು ಗರಿಷ್ಠ 50,112 ಪ್ರಕರಣಗಳು ವರದಿಯಾಗಿದ್ದು, ಈ ಕಠಿಣ ಕ್ರಮಗಳಿಂದಾಗಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ನಿನ್ನೆ 39,900ಕ್ಕೆ ಇಳಿದಿದೆ ಎಂಬುದು ಸಮಾಧಾನಕರ ಸಂಗತಿ. ಬೆಂಗಳೂರಿನಲ್ಲಿ ಮೇ 5 ರಂದು 23,106 ಪ್ರಕರಣಗಳಿದ್ದಿದ್ದು, ನಿನ್ನೆಗೆ 16,286 ಸಂಖ್ಯೆಗೆ ಇಳಿಕೆಯಾಗಿದೆ. ಇದು ನಿರ್ಬಂಧಗಳ ಜಾರಿ ನಂತರ ಪರಿಸ್ಥಿತಿ ಸುಧಾರಿಸುತ್ತಿರುವುದಕ್ಕೆ ನಿದರ್ಶನ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಪ್ರಾರಂಭದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರುಗತಿಯಲ್ಲ್ಲಿದ್ದ ಬೆಂಗಳೂರು, ಬೀದರ್ ಮತ್ತು ಕಲಬುರಗಿಯಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ.

ಕಳೆದ ವರ್ಷ ಮಾರ್ಚ್‍ನಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್‍ಗಳು, 444 ಐಸಿಯು ಗಳು ಹಾಗೂ 610 ವೆಂಟಿಲೇಟರ್ ಸಹಿತ ಐಸಿಯು ಗಳ ಸೌಲಭ್ಯವಿತ್ತು. ಈ ಎಲ್ಲ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪ್ರಸ್ತುತ ಇಲಾಖೆಯ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳಲ್ಲಿ 24 ಸಾವಿರ ಆಕ್ಸಿಜನೇಟೆಡ್ ಬೆಡ್‍ಗಳು, 1145 ಐಸಿಯು ಬೆಡ್‍ಗಳು, 2059 ವೆಂಟಿಲೇಟರ್ ಬೆಡ್‍ಗಳು ಹಾಗೂ 1248 ಹೆಚ್‍ಎಫ್‍ಎನ್‍ಸಿ ಸೌಲಭ್ಯಗಳು ಲಭ್ಯವಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, 4700 ರಿಂದ 9405 ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಬೆಡ್‍ಗಳ ಸಂಖ್ಯೆಯನ್ನು 341 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಎಚ್‍ಎಫ್‍ಎನ್‍ಸಿಗಳ ಸಂಖ್ಯೆಯನ್ನು 15 ರಿಂದ 570ಕ್ಕೆ ಹೆಚ್ಚಿಸಲಾಗಿದೆ.

ಆಸ್ಪತ್ರೆಗಳ ಮೂಲಸೌಕರ್ಯ ಬಲಪಡಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ಹೆಚ್ಚುವರಿ ವೆಂಟೆಲೇಟರುಗಳು ಮತ್ತಿತರ ಸೌಲಭ್ಯಗಳು ನಿರಂತರವಾಗಿ ಸೇರ್ಪಡೆಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಸುಮಾರು 200 ವೆಂಟಿಲೇಟರುಗಳನ್ನು ನೀಡಲಾಗಿದೆ.

ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ
ಖಾಸಗಿ ವೈದ್ಯಕೀಯ ಕಾಲೇಜುಗಳು ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚಿಸಲು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುತ್ತಿದ್ದೇವೆ. ಇಂತಹ ಆಸ್ಪತ್ರೆಗಳಿಗೆ ಸರ್ಕಾರ ಶೇ. 70ರ ಸಹಾಯ ಧನ ನೀಡಲಿದ್ದು, ಉಳಿದ ಶೇ. 30ರ ಮೊತ್ತವನ್ನು ಆಯಾ ಆಸ್ಪತ್ರೆಗಳು ಭರಿಸಬೇಕು.

ಅಂತೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, 4700 ರಿಂದ 9405 ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಬೆಡ್‍ಗಳ ಸಂಖ್ಯೆಯನ್ನು 341 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಎಚ್‍ಎಫ್‍ಎನ್‍ಸಿಗಳ ಸಂಖ್ಯೆಯನ್ನು 15 ರಿಂದ 570ಕ್ಕೆ ಹೆಚ್ಚಿಸಲಾಗಿದೆ.

ಭಾರತ ಸರ್ಕಾರವು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ಪೂರೈಕೆ ಮಾಡುತ್ತಿದೆ. ಈ ವರೆಗೆ 1.10 ಕೋಟಿ ಡೋಸ್‍ಗಳನ್ನು ಭಾರತ ಸರ್ಕಾರ ಒದಗಿಸಿದ್ದು, ಅದರಲ್ಲಿ 99.5 ಲಕ್ಷ ಕೋವಿಶೀಲ್ಡ್ ಹಾಗೂ 10.9 ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳಿವೆ.

ಜಾಗತಿಕ ಟೆಂಡರ್
ರಾಜ್ಯ ಸರ್ಕಾರವು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆಗಳ ಖರೀದಿಗೆ ಆದೇಶ ನೀಡಿದೆ. ಅದರಲ್ಲಿ 2 ಕೋಟಿ ಡೋಸ್ ಕೋವಿಶೀಲ್ಡ್ ಹಾಗೂ 1 ಕೋಟಿ ಡೋಸ್ ಕೊವ್ಯಾಕ್ಸಿನ್ ಸೇರಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರು ಕರೆಯಲಾಗಿದೆ.

ಈವರೆಗೆ 7.5 ಲಕ್ಷ ಕೋವಿಶೀಲ್ಡ್ ಹಾಗೂ 1.44 ಲಕ್ಷ ಕೊವ್ಯಾಕ್ಸಿನ್ ಸೇರಿದಂತೆ 8.94 ಲಕ್ಷ ಡೋಸ್‍ಗಳು ಲಭ್ಯವಾಗಿದೆ. ಕೊವಿಶೀಲ್ಡ್ ಲಸಿಕೆ ಪಡೆದ 14.87 ಲಕ್ಷ ಫಲಾನುಭವಿಗಳು ಆರು ವಾರ ಪೂರೈಸಿದ್ದು, ಎರಡನೇ ಡೋಸ್‍ಗೆ ಅರ್ಹತೆ ಹೊಂದಿದ್ದಾರೆ. ಕೊ-ವ್ಯಾಕ್ಸಿನ್ ಮೊದಲ ಡೋಸ್ ಪಡೆದ 5.10 ಲಕ್ಷ ಫಲಾನುಭವಿಗಳು 4 ವಾರ ಪೂರೈಸಿದ್ದು, ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಅಂದರೆ ಇಂದಿನ ಅಂಕಿ ಅಂಶಗಳ ಪ್ರಕಾರ 19.97 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ.

ಕಂದಾಯ ಸಚಿವ ಅಶೋಕ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿಗಳ ಪರಿಶೀಲನೆ ವೇಳೆ ಆಸ್ಪತ್ರೆಗಳ ಕಳ್ಳಾಟ ಬಯಲುಗೊಳಿಸಿದ್ದೇವೆ. ತಪ್ಪು ಲೆಕ್ಕ ಕೊಟ್ಟಿದ್ದ ಖಾಸಗಿ ಆಸ್ಪತ್ರೆಗಳಿಂದ ಬೆಡ್​ ಪಡೆದಿದ್ದೇವೆ. ಖಾಸಗಿ ಆಸ್ಪತ್ರೆಗಳಿಂದ ಹೆಚ್ಚುವರಿಯಾಗಿ 2,216 ಬೆಡ್ ಪಿಪಿಇ ಕಿಟ್ ಧರಿಸಿ ಅಧಿಕಾರಿಗಳಿಂದ ರಿಯಾಲಿಟಿ ಚೆಕ್​ ನಡೆಸಿ 2,216 ಬೆಡ್ ಹೆಚ್ಚುವರಿಯಾಗಿ ಪಡೆದಿದ್ದೇವೆ. 1 ವಾರದಲ್ಲಿ ಖಾಸಗಿಯವರಿಂದ 2,216 ಬೆಡ್ ಪಡೆದಿದ್ದೇವೆ. ರಾಜ್ಯದಲ್ಲಿ 1,635 ಕೊವಿಡ್ ಕೇರ್ ಸೆಂಟರ್ ಆರಂಭವಾಗಿವೆ. ಕೊವಿಡ್ ಬಾಡಿಗಳ ಗೌರವಯುತ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 18 ಕಡೆ ಹೊಸದಾಗಿ ಕೊವಿಡ್ ಮೃತದೇಹಗಳ ದಹನಕ್ಕೆ ಹೊಸದಾಗಿ ಉಚಿತವಾಗಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು