ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ – ಒಲಿಂಪಿಕ್ಸ್ ಕ್ರೀಡಾಪಟುಗಳು ಹೃದಯವನ್ನು ಗೆದ್ದಿದ್ದಾರೆ – ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ, 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

ನವದೆಹಲಿ: ಇಂದು ಭಾರತದಲ್ಲಿ ಅತಿದೊಡ್ಡ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇದುವರೆಗೆ 54 ಕೋಟಿಗೂ ಹೆಚ್ಚು ಜನರು ಲಸಿಕೆಯ ಡೋಸ್ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

READ ALSO

75 ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ, ನಮ್ಮ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ವಿಜ್ಞಾನಿಗಳು ಮತ್ತು ಕೋಟ್ಯಂತರ ನಾಗರಿಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಇತರರ ಸೇವೆಗಾಗಿ ಪ್ರತಿ ಕ್ಷಣವನ್ನೂ ಮೀಸಲಿಟ್ಟವರು ನಮ್ಮ ಮೆಚ್ಚುಗೆಗೆ ಅರ್ಹರು ಎಂದು ಹೇಳಿದ ಮೋದಿ ಕೊರೊನಾ ವಾರಿಯರ್ಸ್‍ಗಳ ಸೇವೆಯನ್ನು ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ, ನಾವು ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ. 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದ್ದು, ಈ ಯೋಜನೆ ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಎಂದು ತಿಳಿಸಿದರು. ಇದರ ಜೊತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ 75 ವಂದೇ ಭಾರತ್ ರೈಲುಗಳು 75 ವಾರಗಳಲ್ಲಿ ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದರು.

ಮೋದಿ ಭಾಷಣದ ಮುಖ್ಯಾಂಶಗಳು: 21 ನೇ ಶತಮಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬಳಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ, ನಾವು ಹಿಂದುಳಿದಿರುವ ವಿಭಾಗ, ಹಿಂದುಳಿದಿರುವ ಪ್ರದೇಶವನ್ನು ಕೈ ಹಿಡಿಯಬೇಕು.

ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಕಮಿಷನ್ ಅನ್ನು ರಚಿಸಲಾಗಿದೆ ಮತ್ತು ಭವಿಷ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಒಂದೆಡೆ ಲಡಾಖ್ ಆಧುನಿಕ ಮೂಲಸೌಕರ್ಯಗಳ ಸೃಷ್ಟಿಗೆ ಸಾಕ್ಷಿಯಾಗಿದ್ದರೆ, ಮತ್ತೊಂದೆಡೆ ಇಂಡಸ್ ಸೆಂಟ್ರಲ್ ಯೂನಿವರ್ಸಿಟಿ ಲಡಾಖ್ ಅನ್ನು ಉನ್ನತ ಶಿಕ್ಷಣದ ಕೇಂದ್ರವನ್ನಾಗಿಸುತ್ತದೆ.

ಕಳೆದ 7 ವರ್ಷಗಳಲ್ಲಿ ಆರಂಭವಾದ ಅನೇಕ ಯೋಜನೆಗಳ ಪ್ರಯೋಜನಗಳು ಕೋಟ್ಯಂತರ ಬಡವರ ಮನೆಬಾಗಿಲನ್ನು ತಲುಪಿವೆ. ಇಂದು ಸರ್ಕಾರದ ಯೋಜನೆಗಳು ವೇಗವನ್ನು ಪಡೆದುಕೊಂಡಿವೆ ಮತ್ತು ಅವುಗಳ ಗುರಿಗಳನ್ನು ತಲುಪುತ್ತಿವೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಮಗೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರು ನಮ್ಮ ಹೃದಯವನ್ನು ಗೆಲ್ಲುವುದರ ಜೊತೆಗೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಆಗಿದ್ದಾರೆ.

ಜನೌಷಧಿ ಯೋಜನೆಯಡಿ ಬಡವರು ಮತ್ತು ನಿರ್ಗತಿಕರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. ಇಲ್ಲಿಯವರೆಗೆ 75 ಸಾವಿರಕ್ಕೂ ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗ ನಾವು ಆಧುನಿಕ ಪ್ರಯೋಗಾಲಯಗಳು ಮತ್ತು ಬ್ಲಾಕ್ ಮಟ್ಟದಲ್ಲಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ.

ಮುಂದಿನ ತಲೆಮಾರಿನ ಮೂಲಸೌಕರ್ಯ, ವಿಶ್ವ ದರ್ಜೆಯ ತಯಾರಿಕೆ, ಹೊಸತನ ಮತ್ತು ಹೊಸ ಯುಗದ ತಂತ್ರಜ್ಞಾನಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು.

ಇಂದು ನಮ್ಮ ಹಳ್ಳಿಗಳು ವೇಗವಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತೇವೆ. ಕಳೆದ ಕೆಲವು ವರ್ಷಗಳಲ್ಲಿ, ರಸ್ತೆ ಮತ್ತು ವಿದ್ಯುತ್‍ನಂತಹ ಸೌಲಭ್ಯಗಳು ಹಳ್ಳಿಗಳನ್ನು ತಲುಪಿವೆ. ಇಂದು, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಹಳ್ಳಿಗಳಿಗೆ ಡೇಟಾ ಶಕ್ತಿಯನ್ನು ಒದಗಿಸುತ್ತದೆ, ಇಂಟರ್ನೆಟ್ ಅಲ್ಲಿಗೆ ತಲುಪುತ್ತಿದೆ. ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ.