ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರಿಗೆ ಆಹ್ವಾನ

ಮಂತ್ರಾಲಯ: ಶ್ರೀ ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.

‘ಮಂತ್ರಾಲಯದಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 4ರವರೆಗೆ ನಡೆಯಲಿರುವ ಶ್ರೀರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಳು ದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸಾವಿರಾರು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ’.

READ ALSO

ಮೂರು ದಿನ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ಜರುಗಲಿದೆ. ತುಂಗಾನದಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ನದಿಗೆ ನೀರು ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಠದಿಂದ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

‘ಅಯೋಧ್ಯೆಯಲ್ಲಿ ಮಂತ್ರಾಲಯದ ಶಾಖಾಮಠ ಸ್ಥಾಪನೆಗೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸೂಕ್ತ ಜಾಗ ಖರೀದಿಗೆ ಸ್ಪಂದಿಸುತ್ತಿಲ್ಲ. ದೂರದ ಪ್ರದೇಶದಲ್ಲಿ ಜಾಗ ತೋರಿಸಲಾಗುತ್ತಿದೆ. ಮಠದಿಂದಲೇ ಜಾಗ ಖರೀದಿಸಿ ನಿರ್ಮಾಣ ಮಾಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.’ಮಂತ್ರಾಲಯದಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಬಗ್ಗೆ ಅನೇಕ ವರ್ಷಗಳಿಂದ ಬೇಡಿಕೆಯಿದೆ. ಅಂಧ್ರಪ್ರದೇಶ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, 4 ಏಜೆನ್ಸಿಗಳು ಸಮೀಕ್ಷೆ ಮಾಡಿವೆ. ಸರ್ಕಾರ ಸಹಕಾರ ನೀಡುತ್ತಿದೆ’ ಎಂದು ತಿಳಿಸಿದರು.’ಬೆಂಗಳೂರಿನ ಭಕ್ತರೊಬ್ಬರು ಮಂತ್ರಾಲಯದಲ್ಲಿ 100 ಕೊಠಡಿಗಳ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಆಗಸ್ಟ್ 21ರಂದು ಸಮುಚ್ಚಯಕ್ಕೆ ಅಡಿಗಲ್ಲು ಹಾಕಲಾಗುವುದು. ಕಾರುಗಳ ಪಾರ್ಕಿಂಗ್ ವ್ಯವಸ್ಥೆ3 ಭಾಗಗಳಲ್ಲಿ ಇಂಟರ್ ಲಾಕಿಂಗ್ ವ್ಯವಸ್ಥೆ, ಬೃಂದಾವನ ಗಾರ್ಡನ್ ಹಿಂಭಾಗದಲ್ಲಿ ವಸತಿ ಸಮುದಾಯ ಭವನ, ಮಂಚಾಲಮ್ಮ ದೇವಸ್ಥಾನದ ಬಳಿ ಕಾರಿಡಾರ್, ಮ್ಯೂಸಿಯಂ ಸೇರಿ ಹತ್ತು ಹಲವು ಯೋಜನೆಗಳಿಗೆ ಶೀಘ್ರವೇ ಚಾಲನೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.