ಸಾಮಾನ್ಯವಾಗಿ ಬಹುತೇಕ ಮಂದಿ ಬಾಯಿ ಹುಣ್ಣು ಅಥವಾ ಮೌತ್ ಅಲ್ಸರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಇದು ಬಾಯಿಯ ಒಳಗಡೆ ಉಂಟಾಗುವ ಹುಣ್ಣಾಗಿದೆ. ಇದು ಅಂಥ ಅಪಾಯಕಾರಿಯಲ್ಲದಿದ್ದರೂ ಇದು ಬಂದಾಗ ಆಗುವ ನೋವು ಮಾತ್ರ ಅಸಹನೀಯ. ರಾಸಾಯನಿಕ ವಸ್ತುಗಳಿಗೆ ತೀರಾ ಸೆನ್ಸಿಟಿವ್ ಆಗಿರುವ ವ್ಯಕ್ತಿಗಳಿಗೆ ಬಾಯಿ ಹುಣ್ಣು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ರಾಸಾಯನಿಕಗಳ ಘಾಟು ವಾಸನೆಯಿಂದ ಬಾಯಿ ಹುಣ್ಣಾಗಬಹುದು.
ಬಾಯಿ ಹುಣ್ಣುಗಳು ಸಾಮಾನ್ಯವಾಗಿ ಚಿಕ್ಕ ಗಾತ್ರದ್ದಾಗಿದ್ದು, ಒಂದು ಮಿಲಿಮೀಟರ್ ನಿಂದ ಕೆಲವು ಸೆಂಟಿಮೀಟರ್‌ಗಳವರೆಗೆ ಬೆಳೆಯ ಬಹುದು. ಬಾಯಿಯ ಒಳ ಚರ್ಮದ ಮೇಲೆ ಹುಣ್ಣಾಗಿರುವಾಗ ಕೆಲವು ಕಡೆ ಚರ್ಮ ಸೀಳುವಿಕೆ ಸಹ ಉಂಟಾಗುತ್ತದೆ. ಹುಣ್ಣಿನ ಸುತ್ತಲೂ ಉಬ್ಬಿಕೊಂಡಿದ್ದು ಇವು ಹಳದಿ, ಬಿಳಿ ಅಥವಾ ಬೂದು ಬಣ್ಣದ್ದವಾಗಿರಬಹುದು. ಬಾಯಿ ಹುಣ್ಣಾಗುವುದು ಸಾಮಾನ್ಯ ಸಂಗತಿಯೇ ಆದರೂ ಇವು ಪದೆ ಪದೆ ಕಾಣಿಸಿಕೊಂಡಲ್ಲಿ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಬಾಯಿ ಹುಣ್ಣಿಗೆ ಕಾರಣಗಳು ಹೀಗಿವೆ.
1.ಏನಾದರೂ ತಿನ್ನುವಾಗ ಅಥವಾ ಮಾತನಾಡುವಾಗ ಅನಿರೀಕ್ಷಿತವಾಗಿ ಬಾಯಿಯೊಳಗಿನ ಚರ್ಮವನ್ನು ಹಲ್ಲಿನಿಂದ ಕಚ್ಚಿಕೊಂಡಾಗ.
2.ಕಬ್ಬಿಣಾಂಶ, ಫೊಲಿಕ್ ಆಸಿಡ್ ಅಥವಾ ವಿಟಮಿನ್ ಬಿ೧೨ ಕೊರತೆಯಿಂದ.
3.ಚಾಕೊಲೇಟ್, ಶೇಂಗಾ, ಮೊಟ್ಟೆ, ಕಾಳುಗಳು, ಬಾದಾಮಿ ಬೀಜ, ಸ್ಟ್ರಾಬೆರ್ರಿ, ಚೀಸ್ ಮತ್ತು ಸಿಟ್ರಸ್ ಹಣ್ಣುಗಳಿಂದ ಅಲರ್ಜಿ ಇದ್ದಲ್ಲಿ ಬಾಯಿ ಹುಣ್ಣು ಕಾಣಿಸಿಕೊಳ್ಳಬಹುದು.
4.ವೈರಸ್ ಸೋಂಕಿನಿಂದ (ಶೀತ ನೆಗಡಿ)
5.ಜಠರದೊಳಗಿನ ರೋಗ ಅಥವಾ ಇನ್ನಾವುದೇ ಸಮಸ್ಯೆಯಿಂದ
6.ಯಾವುದಾದರೂ ಔಷಧಿಯ ಅಡ್ಡಪರಿಣಾಮಗಳಿಂದ
7.ಅತಿ ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ
8.ಬಾಯಿಯ ಸ್ವಚ್ಛತೆಗೆ ಗಮನಹರಿಸದಿರುವುದರಿಂದ
9.ಹಲ್ಲುಗಳೊಂದಿಗೆ ಸತತವಾಗಿ ಉಜ್ಜುವುದರಿಂದ
10.ಭಾವನಾತ್ಮಕ ಒತ್ತಡಗಳಿಂದ
11.ಬಾಯಿಯ ಬ್ಯಾಕ್ಟೀರಿಯಾದ ಅಲರ್ಜಿಯ ಕಾರಣದಿಂದ
12.ಮಲಬದ್ಧತೆಯಿಂದ ಬಳಲುತ್ತಿರುವವರಲ್ಲಿ ಕೂಡ ಬಾಯಿ ಹುಣ್ಣು ಆಗುವ ಸಾಧ್ಯತೆಗಳಿವೆ
13.ಧೂಮಪಾನ ಮಾಡುವವರು ಧೂಮಪಾನವನ್ನು ಒಮ್ಮೆಲೆ ನಿಲ್ಲಿಸಿ ಬಿಟ್ಟಾಗ ಬಾಯಿ ಹುಣ್ಣು ಕಾಣಿಸಿಕೊಳ್ಳಬಹುದು
ಬಾಯಿ ಹುಣ್ಣಿನ ಲಕ್ಷಣಗಳು ಹೇಗಿರುತ್ತವೆ ಗೊತ್ತಾ?
ಬಾಯಿ ಹುಣ್ಣು ಸಾಮಾನ್ಯವಾಗಿ ಬಾಯಿಯ ಮುಂಭಾಗದಲ್ಲಿ ಉಂಟಾಗುತ್ತವೆ. ಹುಣ್ಣು ಆಗುವ ಸಂದರ್ಭದಲ್ಲಿ ಬಾಯಲ್ಲಿ ಉರಿಯುವ ಹಾಗೂ ಚುಚ್ಚಿದ ಅನುಭವ ಆಗತೊಡಗುತ್ತದೆ. ಅಂದರೆ ಇನ್ನೂ ಹುಣ್ಣು ಕಾಣಿಸಿಕೊಳ್ಳುವ ಮೊದಲೇ ಈ ಲಕ್ಷಣಗಳು ಕಂಡುಬರುತ್ತವೆ.
ಹುಣ್ಣಿನ ತೀವ್ರತೆ ಜಾಸ್ತಿಯಾದಲ್ಲಿ ಜ್ವರ ಬರಬಹುದು, ಆಯಾಸವಾಗಬಹುದು ಮತ್ತು ಒಸಡುಗಳು ಊದಿಕೊಳ್ಳಬಹುದು. ಒಂದು ವೇಳೆ ಹುಣ್ಣು ಒಂದು ತಿಂಗಳೊಳಗೆ ಮಾಯದಿದ್ದಲ್ಲಿ ಅದನ್ನು ಬಯಾಪ್ಸಿ ಮೂಲಕ ಗುಣಪಡಿಸಬೇಕಾಗುತ್ತದೆ.
ಬಾಯಿ ಹುಣ್ಣಿನ ಪತ್ತೆಹಚ್ಚುವಿಕೆ
ವೈದ್ಯರು ಬಾಯಿಯೊಳಗೆ ಪರೀಕ್ಷಿಸಿ ಆಗಿರುವುದು ಬಾಯಿ ಹುಣ್ಣಾ ಅಥವಾ ಅಲ್ಲವಾ ಎಂಬುದನ್ನು ನಿರ್ಧರಿಸುತ್ತಾರೆ. ಇನ್ನು ನಿಮ್ಮ ಹಿಂದಿನ ಮೆಡಿಕಲ್ ಹಿಸ್ಟರಿ ಮೂಲಕ ನಿಮಗೆ ಬಾಯಿ ಹುಣ್ಣು ಯಾಕಾಗುತ್ತಿದೆ ಎಂಬುದನ್ನು ಸಹ ಅವರು ತಿಳಿಸಬಲ್ಲರು. ಒಂದು ವೇಳೆ ಹುಣ್ಣು ಚಿಕ್ಕ ಗಾತ್ರದ್ದಾಗಿದ್ದರೆ ಅದಕ್ಕೆ ದೊಡ್ಡ ಪ್ರಮಾಣದ ಔಷಧಿ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಹುಣ್ಣು ದೊಡ್ಡದಾಗಿದ್ದು ತಡೆಯಲಸಾಧ್ಯವಾದ ನೋವು ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಹಾಗೆಯೇ ಮೂರು ವಾರಗಳಿಗಿಂತ ಹೆಚ್ಚು ಬಾಯಿ ಹುಣ್ಣು ಇದ್ದಲ್ಲಿ ಆಗಲೂ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಓರೆಕೋರೆ ಹಲ್ಲುಗಳು ಅಥವಾ ಬಾಯಲ್ಲಿನ ಸಣ್ಣ ಗಾಯದ ಕಾರಣದಿಂದ ಸಾಮಾನ್ಯವಾಗಿ ಬಾಯಿ ಹುಣ್ಣು ಬರುವುದರಿಂದ ಇದರ ಪತ್ತೆ ಕಾರ್ಯ ಸುಲಭವಾಗಿದೆ.
ಬಾಯಿ ಹುಣ್ಣು ನಿವಾರಣೆಗೆ ಏನು ಮಾಡಬೇಕು?
ಬಾಯಿ ಹುಣ್ಣಿನ ತಾತ್ಕಾಲಿಕ ಶಮನಕ್ಕೆ ಹಾಗೂ ಅದರ ಸಂಪೂರ್ಣ ನಿವಾರಣೆಗೆ ಸಾಕಷ್ಟು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಕಾರ್ಟಿಕೊ ಸ್ಟೆರಾಯ್ಡ್, ಲೋಕಲ್ ಅನಸ್ಥೆಟಿಕ್ಸ್, ಪ್ರೊಟೆಕ್ಟಂಟ್ಸ್, ಆಸ್ಟ್ರಿಂಜೆಂಟ್ಸ್ ಮತ್ತು ಆಂಟಿಸೆಪ್ಟಿಕ್ಸ್ ಪ್ರಮುಖವಾಗಿವೆ. ಬೆಂಜೋಕೈನ್ ಹಾಗೂ ಇತರ ನೋವು ನಿವಾರಕ ಕ್ರೀಮ್ ಹಾಗೂ ಜೆಲ್‌ಗಳು ಸಹ ಹುಣ್ಣು ನಿವಾರಣೆಗೆ ಸಹಕಾರಿಯಾಗಿವೆ. ನಿಯಮಿತವಾಗಿ ಉಪ್ಪು ನೀರಿನಿಂದ ಮತ್ತು ಬೇಕಿಂಗ್ ಸೋಡಾದಿಂದ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದು.
ಚಮೊಮೈಲ್ ಟೀ ಹಚ್ಚುವುದರಿಂದ ಅಥವಾ ಅದನ್ನು ಬಾಯಿಯೊಳಗೆ ಮುಕ್ಕಳಿಸುವುದರಿಂದ ಸಹ ಹುಣ್ಣು ಕಡಿಮೆ ಮಾಡಬಹುದು. ಒಂದು ವೇಳೆ ನಿಮಗೆ ಆಗಾಗ ಹುಣ್ಣು ಕಾಣಿಸಿಕೊಳ್ಳುತ್ತಿದ್ದರೆ ಮೊದಲು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೂಲಿಕೆಗಳ ಔಷಧಿ ಸೇವಿಸುವುದು ಒಳ್ಳೆಯದು. ಎಕಿನೇಶಿಯಾ, ಆಸ್ಟ್ರಾಗಲಸ್ ಮತ್ತು ವೈಲ್ಡ್ ಇಂಡಿಗೊ ಮೂಲಿಕೆಗಳನ್ನು ಬಳಸಬಹುದು.
ಬಾಯಿ ಹುಣ್ಣು ನಿವಾರಣೆಗೆ ಕ್ಲೋರಹೆಕ್ಸಿಡೈನ್ ಗ್ಲುಕೋನೇಟ್ ಮೌತ್ ವಾಶ್ ಬಳಸುವಂತೆ ಬಹುತೇಕ ವೈದ್ಯರು ಸಲಹೆ ನೀಡುತ್ತಾರೆ. ದಿನಕ್ಕೆರಡು ಬಾರಿ ಇದರಿಂದ ಬಾಯಿ ಮುಕ್ಕಳಿಸಬೇಕು. ಹೈಡ್ರೊಕಾರ್ಟಿಸೋನ್ ಇದು ಬಹುತೇಕ ಬಳಸಲ್ಪಡುವ ಕಾರ್ಟಿಕೊ ಸ್ಟೆರಾಯ್ಡ್ ಆಗಿದೆ. ಇದೊಂದು ಪೆಪ್ಪರಮೆಂಟ್ ರೀತಿಯ ಮಾತ್ರೆಯಾಗಿದ್ದು ಬಾಯಿಯಲ್ಲಿ ತಾನಾಗಿಯೇ ಕರಗುತ್ತದೆ. ಇನ್ನು ದೇಹದಲ್ಲಿ ವಿಟಮಿನ್ ಕೊರತೆಯಿಂದ ಹುಣ್ಣು ಆಗುತ್ತಿದ್ದಲ್ಲಿ ಪ್ರತಿದಿನ 10 ರಿಂದ 50 ಮಿಲಿಗ್ರಾಂ ಬಿ-ಕಾಂಪ್ಲೆಕ್ಸ್ ವಿಟಮಿನ್ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಮಕ್ಕಳಲ್ಲಿ ಬಾಯಿ ಹುಣ್ಣು ಕಾಣಿಸಿಕೊಂಡಲ್ಲಿ ಜಿಂಕ್ ಮಾತ್ರೆಗಳನ್ನು ನೀಡಬಹುದು. ಇದರಿಂದ ಹೊಸ ಸ್ನಾಯುಗಳು ಬೆಳೆಯಲು ಸಹಕಾರಿಯಾಗುತ್ತದೆ. ಹಾಗೆಯೇ ಐಸ್ ಕ್ಯೂಬ್ ಹಚ್ಚುವುದರಿಂದ ಹುಣ್ಣು ಬೇಗನೆ ಮಾಯುತ್ತವೆ. ಮಂಜುಗಡ್ಡೆಯನ್ನು ನೇರವಾಗಿ ಹುಣ್ಣಿಗೆ ಸುಮಾರು 40 ನಿಮಿಷಗಳ ಕಾಲ ಹಚ್ಚಬೇಕು. ಇದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.
ಬಾಯಿ ಹುಣ್ಣು ಬರದಂತೆ ತಡೆಗಟ್ಟುವುದು ಹೇಗೆ?
🔸ಆದಷ್ಟೂ ಸಮತೋಲಿತ ಆಹಾರ ಸೇವಿಸಿ. ಹುಣ್ಣು ಸಣ್ಣದಾಗಿದ್ದರೆ ಮೃದುವಾದ ಆಹಾರ ಸೇವನೆ ಮಾಡಿ.
🔹ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳಿ
🔸ಯಾವಾಗಲೂ ಮೃದುವಾದ ಬ್ರಿಸಲ್ ಇರುವ ಟೂತ್ ಬ್ರಶ್ ಬಳಸಿ ಅಥವಾ ಮೌತ್ ಸ್ಪಾಂಜ್ ಬಳಸಲು ಯತ್ನಿಸಿ
🔹ಹುಣ್ಣು ಇರುವಾಗ ಉಪ್ಪಿನ ಹಾಗೂ ಆಮ್ಲೀಯ ಪದಾರ್ಥಗಳ ಸೇವನೆ ಬೇಡ
🔸ಪ್ರತಿ ಬಾರಿ ಆಹಾರ ಸೇವನೆಯ ನಂತರ ಸ್ವಚ್ಛವಾಗಿ ಬಾಯಿ ಮುಕ್ಕಳಿಸಿ
🔹ಧಾನ್ಯಗಳು, ಕ್ಷಾರಯುಕ್ತ ಹಣ್ಣುಗಳು ಮತ್ತು ತರಕಾರಿಗಳನ್ನು ಅಧಿಕವಾಗಿ ಸೇವಿಸುವುದರಿಂದ ಪದೆ ಪದೆ ಬಾಯಿ ಹುಣ್ಣಾಗದಂತೆ ತಡೆಗಟ್ಟಬಹುದು.
🔸ಬಾಯಿಯಲ್ಲಿ ಸೋಂಕು ಉಂಟಾಗದಂತಿರಲು ಬಹು ವಿಧದ ವಿಟಮಿನ್ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ