ಉತ್ತರ ಪ್ರದೇಶ: ಉತ್ತರ ಪ್ರದೇಶದ ಮದುವೆ ಮನೆಯಲ್ಲಿ ಯಾರು ಊಹಿಸಲು ಸಾಧ್ಯವಾಗದ ಘಟನೆಯೊಂದು ನಡೆದಿದೆ. ಮದುವೆ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯುತ್ತಿದ್ದ ವೇಳೆ ಸುಮಾರು 13 ಮಂದಿ ಮಹಿಳೆಯರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಗ್ರಾಮದಲ್ಲಿ ನಡೆದಿದೆ.
ಮದುವೆ ಮನೆಯಲ್ಲಿ ಸಾಮಾನ್ಯವಾಗಿ ನಡೆಯುವ ಶಾಸ್ತ್ರಗಳಲ್ಲಿ ಅರಿಶಿಣ/ಹಳದಿ ಶಾಸ್ತ್ರವೂ ಒಂದು. ಅಂತೆಯೇ ನೆಬುವಾ ನೌರಂಗಿಯಾ ಗ್ರಾಮದಲ್ಲೂ ಈ ಹಳದಿ ಶಾಸ್ತ್ರ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಯುವತಿಯರು, ಬಂಧು-ಬಳಗದವರು ಭಾಗವಹಿಸಿದ್ದರು. ಬಾವಿಯ ಕಟ್ಟೆಯ ಮೇಲೆ ಕುಳಿತು ಹಳದಿ ಶಾಸ್ತ್ರವನ್ನು ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಬಾವಿಯ ಮೇಲಿದ್ದ ಕಬ್ಬಿಣದ ಗ್ರಿಲ್ ಮುರಿದಿದೆ. ಆಗ ಬಾವಿಯ ಮೇಲೆ ನಿಂತಿದ್ದ ಅಷ್ಟೂ ಮಹಿಳೆಯರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಈ ಘಟನೆ ಬುಧವಾರ ರಾತ್ರಿ 8.30ರ ಸಮಯದಲ್ಲಿ ನಡೆದಿದೆ. ಮಹಿಳೆಯರು ಕುಳಿತಿದ್ದರಿಂದ ಭಾರ ಹೆಚ್ಚಾಗಿ ಬಾವಿಯ ಕಬ್ಬಿಣದ ಗ್ರಿಲ್ ಮುರಿದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನೆರವಿನಿಂದಾಗಿ ಸುಮಾರು 15 ಮಂದಿ ಮಹಿಳೆಯರನ್ನು ರಕ್ಷಿಸಲಾಯಿತು. ಆದರೆ 13 ಜನರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಈ ಘಟನೆಗೆ ಸಂಬಂಧಿಸಿದಂತೆ ದೇಶದ ಪ್ರಧಾನಿ ಕೂಡ ಕಂಬನಿ ಮಿಡಿದಿದ್ದು ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಉತ್ತರಪ್ರದೇಶದ ಕುಶಿನಗರದಲ್ಲಿ ನಡೆದ ಘಟನೆ ಹೃದಯ ವಿದ್ರಾವಕವಾಗಿದೆ. ಇದರಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಕೂಡ ಘಟನೆ ಬಗ್ಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.