ವಿಚಾರಣೆ ವೇಳೆ ಕೂಲ್‌ಡ್ರಿಂಕ್ಸ್‌ ಕುಡಿದ ಪೊಲೀಸ್‌ ಅಧಿಕಾರಿ- ನ್ಯಾಯಮೂರ್ತಿ ನೀಡಿದ್ರು ಕುತೂಹಲದ ಶಿಕ್ಷೆ!

ಅಹಮದಾಬಾದ್‌: ವರ್ಚ್ಯುವಲ್​ ವಿಚಾರಣೆ ವೇಳೆ ಪೊಲೀಸರೊಬ್ಬರು ಕೂಲ್‌ಡ್ರಿಂಕ್ಸ್‌ ಕುಡಿದ ಹಿನ್ನೆಲೆಯಲ್ಲಿ, ಮುಖ್ಯನ್ಯಾಯಮೂರ್ತಿಗಳು ಅಚ್ಚರಿಯ ಶಿಕ್ಷೆ ನೀಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.

READ ALSO

ಕೋರ್ಟ್‌ ವಿಚಾರಣೆ ವೇಳೆ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು ಈ ಒಂದು ಶಿಕ್ಷೆ ನೀಡಿದ್ದಾರೆ. ಅದೇನೆಂದರೆ 100 ಕ್ಯಾನ್​​ಗಳಷ್ಟು ತಂಪು ಪಾನೀಯ ವಿತರಿಸಿ ಎಂದು ಹೇಳಿದ್ದಾರೆ.

ಆಗಿದ್ದೇನೆಂದರೆ ವರ್ಚ್ಯುವಲ್​ ವಿಚಾರಣೆ ನಡೆಯುತ್ತಿತ್ತು. ಆಗ ವಿಚಾರಣೆಗೆ ಹಾಜರು ಇದ್ದ ವಕೀಲರು, ಪೊಲೀಸರು ವಿಚಾರಣೆ ಆಲಿಸುತ್ತಿದ್ದರು. ಆದರೆ ಇದೇ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಬಾಯಾರಿಕೆ ಆಯಿತೆಂದು ಒಂದೆರಡು ಗುಟುಕು ತಂಪು ಪಾನೀಯ ಸೇವಿಸಿದರು. ಇದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್​ ಅವರ ಗಮನಕ್ಕೆ ಬಂದಿತು. ವಿಚಾರಣೆ ವೇಳೆ ಇಂಥ ಕ್ರಮವು ಅಶಿಸ್ತು ಎಂದೆನಿಸಿಕೊಳ್ಳುತ್ತದೆ. ಅದೂ ವಿಚಾರಣೆಯ ಭಾಗಿಯಾಗಲು ಯಾವುದೇ ವ್ಯಕ್ತಿ ಬಂದರೂ ಇಂಥ ಕೃತ್ಯಗಳು ಅಶಿಸ್ತು ಎಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕುತೂಹಲ ಎನ್ನಿಸುವಂಥ ಶಿಕ್ಷೆಯನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ.

ವರ್ಚ್ಯುವಲ್​ ಅರ್ಜಿ ವಿಚಾರಣೆ ವೇಳೆ ಕೋಲ್ಡ್​ ಡ್ರಿಂಕ್ಸ್​ ಸೇವಿಸಿದ ನೀವು, ನಮ್ಮ ಕೋರ್ಟ್​ನ ವಕೀಲರಿಗೆ (ಬಾರ್​ ಅಸೋಸಿಯೇಶನ್​ ಸಿಬ್ಬಂದಿ) 100 ಕ್ಯಾನ್​​ಗಳಷ್ಟು ತಂಪು ಪಾನೀಯ ವಿತರಿಸಿ ಎಂದು ಹೇಳಿದ್ದಾರೆ. ವಿಚಾರಣೆ ವರ್ಚ್ಯುವಲ್ ಆಗಿರಲಿ, ಭೌತಿಕವಾಗಿಯೇ ನಡೆಯುತ್ತಿರಲಿ, ಶಿಸ್ತು ಮುಖ್ಯ. ನೀವು ವಿಚಾರಣೆ ಮಧ್ಯೆ ತಂಪು ಪಾನೀಯದಂತೆ ಕಾಣುವ ಏನನ್ನೋ ಸೇವಿಸಿದ್ದೀರಿ. ಇದು ಸರಿಯಾದ ವರ್ತನೆಯಲ್ಲ, ಹೀಗಾಗಿ ಒಂದೋ ಶಿಸ್ತು ಕ್ರಮ ಎದುರಿಸಬೇಕು ಇಲ್ಲವೇ, ನಮ್ಮ ಹೈಕೋರ್ಟ್​ನ 100 ವಕೀಲರಿಗೆ ಕೋಲ್ಡ್​ ಡ್ರಿಂಕ್​ ವಿತರಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು. ಈ ಹಿಂದೆ ವಕೀಲರೊಬ್ಬರು ಸಮೋಸಾ ತಿನ್ನುವ ಮೂಲಕ ಅಶಿಸ್ತು ಪ್ರದರ್ಶನ ಮಾಡಿದ್ದರು. ಅವರಿಗೂ ತರಾಟೆಗೆ ತೆಗೆದುಕೊಂಡಿದ್ದೆ ಎಂದೂ ಸೇರಿಸಿದರು.

ಸ್ವಲ್ಪ ದಿನಗಳ ಹಿಂದೆ ಹೀಗೆ ಅರ್ಜಿಯೊಂದರ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸಾ ತಿಂದಿದ್ದರು. ಆಗ ಅವರಿಗೆ ನಾನು, ನೀವು ಸಮೋಸಾ ತಿನ್ನುವುದಕ್ಕೆ ನಮ್ಮಿಂದ ಏನೂ ಅಡ್ಡಿಯಿಲ್ಲ. ಆದರೆ ನಮ್ಮೆದುರಿಗೆ ನೀವು ತಿನ್ನುವಂತಿಲ್ಲ. ಒಂದೋ ಎಲ್ಲರಿಗೂ ಕೊಟ್ಟು ತಿನ್ನಬೇಕು ಇಲ್ಲವೇ ನೀವೂ ತಿನ್ನಬಾರದು ಎಂದು ಹೇಳಿದ್ದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈಗ ತಂಪು ಪಾನೀಯ ಕುಡಿದ ಪೊಲೀಸ್ ಅಧಿಕಾರಿ ಎ.ಎಂ.ರಾಥೋಡ್​​ಗೂ ಅದನ್ನೇ ಹೇಳಿದ್ದಾರೆ. 100 ಕ್ಯಾನ್​​ ತಂಪು ಪಾನೀಯ ವಿತರಿಸಲು ಸೂಚಿಸಿದ್ದಾರೆ.

ಟ್ರಾಫಿಕ್​ ಜಂಕ್ಷನ್​​ನಲ್ಲಿ ಪೊಲೀಸ್​ ಅಧಿಕಾರಿ ಎ.ಎಂ.ರಾಥೋಡ್​ ಮತ್ತು ಇತರ ಪೊಲೀಸ್ ಅಧಿಕಾರಿಗಳು ಇಬ್ಬರು ಮಹಿಳೆಯರಿಗೆ ಥಳಿಸಿದ್ದಾರೆ ಎಂಬ ಆರೋಪ ಅರ್ಜಿಗೆ ಸಂಬಂಧಪಟ್ಟಂತೆ ಇವರು ಕೋರ್ಟ್​​ನ ವರ್ಚ್ಯುವಲ್​ ವಿಚಾರಣೆಗೆ ಹಾಜರಾಗಿದ್ದರು. ಇನ್ನು ಈ ಪ್ರಕರಣವನ್ನು ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ, ಇನ್ನು 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರೂ ಸೂಚಿಸಿದ್ದಾರೆ. ಅಂದಹಾಗೆ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು ಕನ್ನಡಿಗರು ಎನ್ನುವುದು ವಿಶೇಷ.