ಬೆಂಗಳೂರು: ರಾಜ್ಯದ ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಯು ಆಕಾಶವಾಣಿಯಲ್ಲಿ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮಗಳನ್ನು ಜ. 11 ರಿಂದ ತೊಡಗಿದಂತೆ ಎ. 5 ರ ವರೆಗೆ ಪ್ರಸಾರ ಮಾಡಲಿರುವುದಾಗಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸೋಮವಾರದಿಂದ ಶುಕ್ರವಾರದ ವರೆಗೂ ಈ ಕಾರ್ಯಕ್ರಮ ನಡೆಯಲಿದೆ. ಕಲಿಯುತ್ತಾ ನಲಿಯೋಣ ಎಂಬ ಹೆಸರಿನಲ್ಲಿ ಆಕಾಶವಾಣಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ನಿತ್ಯ ಬೆಳಿಗ್ಗೆ 10 ಗಂಟೆಯಿಂದ 10.15 ರ ವರೆಗೆ ಒಂದು ಮತ್ತು ಎರಡನೇ ತರಗತಿಗಳಿಗಾಗಿ ಹಾಗೂ 10.15 ರಿಂದ 10.30 ರ ವರೆಗೆ 3 ಮತ್ತು 4ನೇ ತರಗತಿ ಗಳಿಗಾಗಿ ಹಾಡು, ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ ಇಲಾಖೆ ಈ ಪ್ರಯತ್ನಕ್ಕೆ ಮುಂದಾಗಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.
ಅದರೊಂದಿಗೆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶವಿದ್ದು, ಪೋಷಕರು ತಮ್ಮ ಮಕ್ಕಳಿಂದ ಯಾವುದಾದರೂ ಕತೆ ಹಾಡು ಒಗಟು ಹೇಳಿಸಿ whatsapp ನಂಬರ್ 9449417612 ಗೆ ಕಳುಹಿಸಿದರೆ , ಅದನ್ನು ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದ 13 ಆಕಾಶವಾಣಿ ಕೇಂದ್ರಗಳು ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದು, ಆ ಬಳಿಕ ಯೂಟ್ಯೂಬ್ ನಲ್ಲಿ ಈ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಇರುವುದಾಗಿಯೂ ಸಚಿವರು ಮಾಹಿತಿ ನೀಡಿದ್ದಾರೆ.