ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ಫೋಟೋ ಅನಾವರಣ

ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಫೋಟೋವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ರವರು ಅನಾವರಣಗೊಳಿಸಿದರು. ಸುಭಾಶ್ಚಂದ್ರ ಬೋಸ್ ಅವರ 125 ನೆಯ ಜನ್ಮದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.

ಈ ಭಾವಚಿತ್ರವನ್ನು ಪರೇಶ್ ಮೈಟಿ ಅವರು ರಚಿಸಿದ್ದಾರೆ. ಸುಭಾಶ್ಚಂದ್ರ ಬೋಸ್ ಅವರ ಹಳೆಯ ಭಾವಚಿತ್ರವೊಂದರಿಂದ ಪ್ರೇರಿತಗೊಂಡು ಇದನ್ನು ರಚಿಸಿದ್ದಾರೆ.

READ ALSO

ಈ ಭಾವಚಿತ್ರ ಅನಾವರಣಗೊಂಡ ಮರುಕ್ಷಣವೇ ಇದು ಚಲನಚಿತ್ರವೊಂದರಲ್ಲಿ ಗುಮ್ನಾಮಿ ಬಾಬಾ ಆಗಿ ನಟಿಸಿದ್ದ ಪ್ರಸೇನ್‌ಜಿತ್ ಚಟರ್ಜಿ ಅವರ ಚಿತ್ರ ಅನ್ನುವ ಗೊಂದಲ ಸಾಮಾಜಿಕ ಜಾಲತಾಣದಲ್ಲಿ ಹರಡಿತು. ಒಬ್ಬರು ರಾಷ್ಟ್ರಪತಿಯವರು ಸುಭಾಶ್ಚಂದ್ರ ಬೋಸ್ ಅವರ ಬದಲಿಗೆ ಪ್ರಸೇನ್ಜಿತ್ ಚಟರ್ಜಿ ಅವರ ಫೋಟೋ ಅನಾವರಣಗೊಳಿಸಿದ್ದಾರೆ ಅಂತ ಟ್ವೀಟ್ ಮಾಡಿದ್ದೇ ತಡ, ಅವರನ್ನು ಅನುಸರಿಸಿ ಹಲವಾರು ಟ್ವೀಟ್‌ಗಳು ಬರತೊಡಗಿದವು.

ಸರಕಾರ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆಯನ್ನು ಕೊಡಲಿಕ್ಕೆ ಹೋಗದಿದ್ದರೂ ಬೋಸ್ ಅವರ ಕುಟುಂಬದವರಾದ ಚಂದ್ರಕುಮಾರ್ ಬೋಸ್ ಅವರು ಮಾಡಿದ್ದ ಹಳೆಯ ಟ್ವೀಟ್ ಒಂದರಲ್ಲಿದ್ದ ಬೋಸ್ ಅವರ ಚಿತ್ರಕ್ಕೂ ಇದಕ್ಕೂ ಹೋಲಿಕೆ ಕಂಡುಬಂದಿದ್ದನ್ನು ಮತ್ಯಾರೋ ನೋಡಿ ಟ್ವೀಟ್ ಮಾಡಿದರು.

ಸಂಜೆಯ ಹೊತ್ತಿಗೆ ಚಂದ್ರಕುಮಾರ ಬೋಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಆ ಭಾವಚಿತ್ರದ ಹಿನ್ನೆಲೆಯನ್ನೂ ತಿಳಿಸಿದರು. ಆಗ ರಾಷ್ಟ್ರಪತಿಯವರು ಅನಾವರಣಗೊಳಿಸಿದ್ದು ಬೋಸ್ ಅವರ ನಿಜವಾದ ಫೋಟೋವೇ ಎಂಬುದು ಎಲ್ಲರಿಗೂ ತಿಳಿಯಿತು.