
ಪುತ್ತೂರು: ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅರುಣ್ ಕುಮಾರ್ ಪುತ್ತಿಲ ರವರ ಪರವಾಗಿ ನಡೆದ ಸೇವಾ ಸಮರ್ಪಣಾ ಕಾರ್ಯಕ್ರಮದಲ್ಲಿ “ಪುತ್ತಿಲ ಪರಿವಾರ” ಎಂಬ ಹೊಸ ಸೇವಾ ಪಥದ ಲೋಗೋ ಅನಾವರಣ ಗೊಳಿಸಿದರು.


ಪುತ್ತೂರಿನಲ್ಲಿ ಹಿಂದುತ್ವದ ತತ್ವಸಿದ್ದಾಂತಗಳ ಅಡಿಯಲ್ಲಿ ಸಂಘಟನಾ ಕಾರ್ಯಚಟುವಟಿಕೆಗಳನ್ನು ನಡೆಸಲು ಈ ಸೇವಾ ಪಥವನ್ನು ಹುಟ್ಟು ಹಾಕಲಾಗಿದೆ.

ಅಪಾರ ಸಂಖ್ಯೆಯಲ್ಲಿ ಪುತ್ತಿಲ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದರ್ಭೆ ವೃತ್ತದಿಂದ ಮಹಾಲಿಂಗೇಶ್ವರ ಸನ್ನಿಧಾನದ ವರೆಗೆ ಪಾದಯಾತ್ರೆ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು ಬಳಿಕ ಮಹಾಲಿಂಗೇಶ್ವರ ದೇವರಿಗೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಸೇವಾ ಸಮರ್ಪಣಾ ಕಾರ್ಯಕ್ರಮ ನಡೆಸಲಾಯಿತು.


ಅರುಣ್ ಕುಮಾರ್ ಪುತ್ತಿಲ ರವರು ಮಾತನಾಡುತ್ತಾ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಯಿಂದ , ಹಿರಿಯರ ಆಶೀರ್ವಾದದಿಂದ ಹಾಗೂ ಮುಖ್ಯವಾಗಿ ಎಲ್ಲಾ ಕಾರ್ಯಕರ್ತರ ಪ್ರೀತಿ , ಧೈರ್ಯ , ಶಕ್ತಿಯಿಂದ ಚುನಾವಣಾ ಸಂದರ್ಭದಿಂದ ಹಿಡಿದು ಇಂದಿನ ತನಕ ನನ್ನಲ್ಲಿರುವ ಇಚ್ಛಾ ಶಕ್ತಿ ಕುಗ್ಗದಂತೆ ಕಾಪಾಡಿದ್ದೀರಿ. ಈ ಚುನಾವಣೆಯಲ್ಲಿ ಜನತೆಯೇ ಖರ್ಚು ವೆಚ್ಚ ಬರಿಸಿ ಒಂದು ಹೊಸ ಪರ್ವ ಪ್ರಾರಂಭಿಸಿದ್ದಾರೆ. ಇನ್ನು ಮುಂದೆಯೂ ನಾವೆಲ್ಲರೂ ಸೇರಿ ಇದೇ ಶಕ್ತಿಯಿಂದ ಸಮಾಜಕ್ಕೆ ಸಹಾಯ ಮಾಡುವ, ಕಾರ್ಯಕರ್ತರಿಗೆ ಆಸರೆಯಾಗುವ , ನೊಂದ ಮನಸ್ಸುಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ “ಪುತ್ತಿಲ ಪರಿವಾರ” ಎಂಬ ಹೊಸ ಸೇವಾ ಪಥವನ್ನು ಪ್ರಾರಂಭ ಮಾಡಲಾಗಿದೆ . ಇದು ಯಾವೂದೇ ರಾಜಕೀಯ ಪಕ್ಷ ಅಥವಾ ಸಂಘಟನೆಯಲ್ಲ. ಇದೊಂದು ಏಕಮನಸ್ಸಿನ ಪರಿವಾರ. ಪಕ್ಷಾತೀತವಾಗಿ ಹಿಂದೂಗಳ ನೋವು, ನಲಿವು, ಕಷ್ಟ, ಸುಖಗಳಲ್ಲಿ ಭಾಗಿಗಳಾಗೋಣ. ಯಾವೂದೇ ಅಪಪ್ರಚಾರಗಳಿಗೂ ಕಿವಿ ಕೊಡಬೇಡಿ.ನಿಮ್ಮೆಲ್ಲರ ಪ್ರೀತಿ , ವಿಶ್ವಾಸ ಮತ್ತು ಆಶೀರ್ವಾದ ಇನ್ನು ಮುಂದೆಯೂ ಹೀಗೆ ಇರಲಿ ಎಂದರು. ಜನಸೇವೆಗಾಗಿ ಪುತ್ತಿಲ ಪರಿವಾರ ಎಂಬ ವೇದಿಕೆ ಕಟ್ಟಿಕೊಂಡಿದ್ದೇವೆ. ಇದು ಯಾವುದಕ್ಕೂ ಪರ್ಯಾಯ ಅಲ್ಲ. ವೇದಿಕೆಯ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತಾ ಮತ್ತು ಕಾರ್ಯದರ್ಶಿಯಾಗಿ ಉಮೇಶ್ ಗೌಡ ವೀರಮಂಗಲ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಮತದಾರರೇ ಹಣ ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದು ವಿಚಿತ್ರ ಘಟನೆ, ಅವಮಾನ ಮಾಡಿದವರಿಗೂ ಗುರುತಿಸಿ ಗೌರವಿಸುವ ಹಿಂದೂ ಸಭ್ಯತೆಗೆ ಸೇರಿದವರು ನಾವು ಎಂದು ಸೇವಾ ಸಮರ್ಪಣಾ ಕಾರ್ಯಕರ್ತರ ಸಭೆಯಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಶುಭನುಡಿಗಳನ್ನಾಡಿದರು.
