ಬೆಳ್ತಂಗಡಿ: ನವದೆಹಲಿಯ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಪತ್ರಿಕೆಗಳ ಸಂಘ ಜಂಟಿಯಾಗಿ ಪ್ರಾಯೋಜಿಸುತ್ತಿರುವ ಈ ಪ್ರಶಸ್ತಿ ಅತ್ಯಂತ ಗೌರವದ ಹೆಜ್ಜೆ ಗುರುತು ಮೂಡಿಸಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಸಬಿತಾ ಮೋನಿಸ್ ತಮ್ಮ ದೈಹಿಕ ನ್ಯೂನತೆಯನ್ನು ಮೆಟ್ಟಿನಿಂತು ಛಲ ಬಿಡದೇ ತಮ್ಮ ಎರಡು ಕಾಲುಗಳಿಂದಲೇ ಪರೀಕ್ಷೆ ಬರೆದು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲೂ ಕಾಲಿನಿಂದಲೇ ಮತ ಚಲಾಯಿಸುವ ಮೂಲಕ ಅವರು ರಾಜ್ಯದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಸದ್ಯ ಅವರು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ವಿಶೇಷ ಸಾಧನೆಯನ್ನು ಅಸಾಮಾನ್ಯ ಸಾಧನೆ ಎಂದು ಪರಿಗಣಿಸಿ ಅವರನ್ನು ಈ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ ಎಂದು ಆಯ್ಕೆ ಮಂಡಳಿ ಘೋಷಿಸಿದೆ.
ಅಂಗವೈಕಲ್ಯತೆ ಎಂಬುವುದನ್ನು ಮರೆತು ಧೃತಿಗೆಡದೇ ಪ್ರಯತ್ನ ಪಟ್ಟಲ್ಲಿ ಎಲ್ಲವನ್ನೂ ಮನಸ್ಸಿನಿಂದ ಸಾಧಿಸಬಹುದು. ದೇಹದ ಅಂಗ ನ್ಯೂನತೆಯ ಬಗ್ಗೆ ಯೋಚಿಸದೇ ಸಾಧಿಸಿದರೆ ಎಲ್ಲವನ್ನೂ ಜಯಿಸಬಹುದು ಅಂದ್ರು. ಹುಟ್ಟಿನಿಂದಲೇ ನನಗೆ ಕೈಗಳಿಲ್ಲದಿದ್ದರೂ ಕಾಲನ್ನೇ ಕೈಗಳನ್ನಾಗಿಸಿಕೊಂಡು ಅದರಲ್ಲೇ ನನ್ನ ದಿನನಿತ್ಯದ ಕೆಲಸಗಳನ್ನು ಮಾಡುತ್ತೇನೆ, ಅದಲ್ಲದೆ ಎಲ್ಲರಂತೆ ನಾನೂ ವಿದ್ಯಾಭ್ಯಾಸ ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಮುಗಿಸಿ ಇದೀಗ ನೌಕರಿಯನ್ನು ಮಾಡುತಿದ್ದೇನೆ. ಕೈಗಳಿಲ್ಲ ಎಂದು ಧೃತಿಗೆಟ್ಟು ಕುಳಿತಿದ್ದರೆ ನಾನು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲ, ಈ ನನ್ನ ಪ್ರಯತ್ನಕ್ಕೆ ನಮ್ಮ ಮನೆಯವರು ಶಾಲಾ ಅಧ್ಯಾಪಕರು, ಗೆಳೆಯರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಾ ಬರುತಿದ್ದಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವಾ ಅವರು ಉಚಿತ ಶಿಕ್ಷಣ ನೀಡಿದ್ದಲ್ಲದೇ ಅದೇ ಕಾಲೇಜಿನಲ್ಲಿ ಉದ್ಯೋಗವನ್ನೂ ಕಲ್ಪಿಸಿ ಕೊಟ್ಟಿದ್ದಾರೆ. ನನ್ನ ಎಲ್ಲ ಪ್ರಯತ್ನಗಳಿಗೆ ಸಹಕಾರ ನೀಡಿದ ಹಾಗೂ ನನ್ನ ಸಾಧನೆಯನ್ನು ಗುರುತಿಸಿ ಗೌರವಿಸಿದ ಸಂಘ ಸಂಸ್ಥೆಗಳಿಗೆ ಅಭಿನಂದನೆಗಳು ಎಂದ ಸಬಿತಾ ಮೋನಿಸ್ , ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಗೆ ಗೌರವ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಹಾಗೆಯೇ ಮಹಿಳೆಯರೂ ಕೂಡ ಧೃತಿಗೆಡದೇ ಪ್ರಯತ್ನ ಪಡಬೇಕು ಆಗ ಪ್ರಯತ್ನಕ್ಕೆ ಫಲ ಸಿಕ್ಕೆಸಿಗುತ್ತದೆ ಎಂದು ಸಾಧಕಿ ಸಬಿತಾ ಮೋನಿಸ್ ಅಭಿಪ್ರಾಯಪಟ್ಟರು.