ಬೆಂಗಳೂರು: ಕರ್ನಾಟಕದಲ್ಲಿ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ ಐಜಿಪಿ ಕಚೇರಿಯಿಂದ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದಂತ ಪ್ರವೀಣ್ ಸೂದ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,545 ಪಿಎಸ್‌ಐ ಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ದಿನಾಂಕ 03-10-2021 ರಂದು ರಾಜ್ಯಾದ್ಯಂತ 92 ಕೇಂದ್ರಗಳಲ್ಲಿ ನಡೆಸಲಾಯಿತು. ಈ ಪರೀಕ್ಷೆಗೆ 54,104 ಅಭ್ಯರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಪ್ರಕಟಣೆಯ ನಂತರ ಕೆಲವು ವ್ಯತ್ಯಾಸಗಳು ವರದಿಯಾದ ಮೇರೆಗೆ ಆಂತರಿಕ ವಿಚಾರಣೆ ನಡೆಸಲಾಯಿತು ಎಂದಿದ್ದಾರೆ.
ದಿನಾಂಕ 07-04-2022 ರಂದು ಕೆಲವು ದುಷ್ಕೃತ್ಯಗಳ ಬಗ್ಗೆ ಪುರಾವೆಗಳು ಕಂಡು ಬಂದಿದ್ದರಿಂದ, ಗೃಹ ಸಚಿವರು ಸ್ವತಹ ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಮತ್ತು ಅಪಾದಿತ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಅದೇಶಿಸಿದರು. ಅದರಂತೆ 09-04-2022ರಂದು ಎಫ್‌ಐಆರ್ ದಾಖಲಿಸಿಲಾಗಿದೆ. ಇದುವರೆಗೆ 7 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ನಾಲ್ವರು ಪರೀಕ್ಷೆ ಬರೆದಂತ ಅಭ್ಯರ್ಥಿಗಳು, ಇನ್ನುಳಿದ ಮೂವರು ಕಲಬುರ್ಗಿ ಕೇಂದ್ರದ ಮೇಲ್ವಿಚಾರಕರು ಸೇರಿದ್ದಾರೆ. ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಲಾಗುವುದು ಎಂದು ಹೇಳಿದ್ದಾರೆ. ತನಿಖೆಯನ್ನು ನಿಷ್ಪಕ್ಷಪಾತವಾಗಿ ಮತ್ತು ಸಮಗ್ರವಾಗಿ ಶೀಘ್ರ ಗತಿಯಲ್ಲಿ ಪೂರ್ಣಗೊಳಿಸಲು ಗೃಹ ಸಚಿವರು ಸಿಐಡಿಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ, ಅಂತಿಮ ವರದಿ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಮೇಲ್ವಿಚಾರಕರು ಮತ್ತು ಸಹಾಯಕ ಸಿಬ್ಬಂದಿ ಭಾಗಿಯಾಗಿದ್ದಲ್ಲಿ, ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸಿಐಡಿ(CID) ತನಿಖೆ ಚುರುಕು:
545 ಪಿಎಸೈ ನೇಮಕ ಪರೀಕ್ಷೆಯಲ್ಲಿ ಅಕ್ರಮ ಆರೋಪಗಳ ಕುರಿತ ಸಿಐಡಿ ತನಿಖೆ ಚುರುಕುಗೊಂಡಿದೆ. ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ ಮೂವರು ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕೇಂದ್ರದ ಮೂವರು ಮೇಲ್ವಿಚಾರಕರು ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿ, ಶನಿವಾರ ಕಲಬುರಗಿಯ ಜೆಎಂಎಫ್‌ಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ರಾಯಚೂರು ಮೂಲದ ಕೆ.ಪ್ರವೀಣ ಕುಮಾರ್, ಕಲಬುರಗಿ ಜಿಲ್ಲೆ ಆಳಂದ ನಿವಾಸಿ ಎನ್.ಚೇತನ್ ಹಾಗೂ ಕಲಬುರಗಿ ನಗರದ ಹಾಲ್ ಸುಲ್ತಾನಪುರ ಪ್ರದೇಶದ ಅರುಣ ಪಾಟೀಲ್ ಅಭ್ಯರ್ಥಿಗಳಾದರೆ, ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದ ಸುಮಾ, ಸಿದ್ಧಮ್ಮ ಹಾಗೂ ಸಾವಿತ್ರಿ ಎನ್ನುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತ ಮೂವರು ಅಭ್ಯರ್ಥಿಗಳಲ್ಲೊಬ್ಬ ಕಲ್ಯಾಣ ಕರ್ನಾಟಕ ಜಿಲ್ಲೆಯೊಂದರ ಕಾರಾಗೃಹದ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಈ ಪ್ರಕರಣದಲ್ಲಿ, ಮೊದಲು ಬಂಧಿಸಲಾಗಿದ್ದ ವೀರೇಶ್ ಸೇರಿದಂತೆ ಈವರೆಗೆ 7 ಜನರನ್ನು ಸಿಐಡಿ ಪೊಲೀಸರು ಬಂಧಿಸಿದಂತಾಗಿದೆ. ಸಿಐಡಿ ತನಿಖೆ ವಿಸ್ತಾರಗೊಳ್ಳುತ್ತಿದ್ದಂತೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಕೆಲವರು ನಾಪತ್ತೆಯಾಗಿದ್ದಾರೆ. ಆರ್ಟಿಐ ಕಾರ್ಯಕರ್ತನೊಬ್ಬನ ಚಲನವಲನಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ.
ಇನ್ನು ಯಾದಗಿರಿಯ ವ್ಯಕ್ತಿಯೊಬ್ಬನ ವಿಚಾರಣೆಗೆಂದು ಆತನ ಗ್ರಾಮಕ್ಕೆ ತೆರಳಿದ್ದ ತನಿಖಾ ತಂಡ ಮಾಹಿತಿಗಳ ಜಾಲಾಡಿ ಬಂದಿದೆ. ಕೊನೆಗೆ, ಫೋನ್ ಮೂಲಕ ಸಂಪರ್ಕಕ್ಕೆ ಬಂದಿದ್ದ ಆತ, ಮರುದಿನವೇ ಎಲ್ಲ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದನಾದರೂ, ಇದೀಗ ಸಂಪರ್ಕಕ್ಕೆ ಸಿಗದಿರುವುದು ಮತ್ತಷ್ಟೂ ಅನುಮಾನಗಳಿಗೆ ಕಾರಣವಾಗಿದೆ.