ಜೆ.ಡಿ.ಎಸ್ ನೂತನ ಸಾರಥಿಯಾಗಿ ಸಿ.ಎಂ ಇಬ್ರಾಹಿಂ! ರಾಜ್ಯಾಧ್ಯಕ್ಷ ಹುದ್ದೆ ಯನ್ನೇ ಬಿಟ್ಟು ಕೊಟ್ಟ ಎಚ್.ಡಿ.ಕೆ!

ಬೆಂಗಳೂರು: ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಇಂದು ನಗರದ ಜೆಪಿ ಭವನದಲ್ಲಿ ನಡೆದ ರಾಜ್ಯಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ಮಾಡಿ, ಕಾಲಭೈರವ ಎದ್ದು ಕುಣಿಯುವ ಸಮಯ ಬಂದಿದೆ. ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರ ಬರುವುದಕ್ಕೆ “ಹರ ಹರ ಮಹದೇವ” ಎಂದು ಜೋಳಿಗೆ ತೆಗೆದುಕೊಂಡು ಹೊರಡುತ್ತೇನೆ ಎಂದು ಹೇಳಿದರು.

ಜೆಡಿಎಸ್ ನನಗೆ ಪಾರ್ಟಿ ಅಲ್ಲ, ಅದು ನನ್ನ ಕುಟುಂಬ. ನಾನು ಕಳೆದ ಒಂದು ವರ್ಷದಿಂದ ಏನ್ ಹೇಳಿದ್ದೆ ಅದೇ ಆಗುತ್ತಿದೆ. ದೇವೇಗೌಡರಿಗೆ ಸಂಸತ್ತಿನಲ್ಲಿ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ವೇಳೆ ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಹೇಳ್ತಾರೆ ಗೌಡರಿಗೆ ಬೆಂಬಲ ಕೊಡುತ್ತೇವೆ ಎಂದು. ಆದ್ರೆ ನಮ್ಮ ಗೌಡರು ಬೆಂಬಲ ತೆಗೆದುಕೊಳ್ಳಲು ಹೋಗಲಿಲ್ಲ. ಅದು ಗೌಡರ ರಾಜಕಾರಣ. ಈಗ ಕೆಲವರು ಗೌಡರ ಬಗ್ಗೆ ಮಾತಾಡ್ತಾರೆ. ಅವರಿಗೆ ಏನ್ ಗೊತ್ತು ಗೌಡರ ವಿಚಾರ? ಇದೇ ಗೌಡರ ಸಮ್ಮುಖದಲ್ಲಿ ಕುಮಾರಸ್ವಾಮಿ ಪಟ್ಟಾಭಿಷೇಕ ಮಾಡ್ತೀವಿ. ಮೇ ತಿಂಗಳಿನಲ್ಲಿ ನಾವೆಲ್ಲಾ ಉತ್ತರ ಕರ್ನಾಟಕ ಭಾಗಕ್ಕೆ ಹೋಗುತ್ತೇವೆ. ಇನ್ನು ಬೇರೆ ಪ್ರಶ್ನೆಯೇ ಇಲ್ಲ. ರಾಜ್ಯಾದ್ಯಂತ ಸುತ್ತಲು ಹೊರಡುತ್ತೇವೆ ಎಂದು ರಾಜ್ಯ ಪ್ರವಾಸದ ಬಗ್ಗೆ ಘೋಷಣೆ ಮಾಡಿದರು.

READ ALSO

ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧನ್ಯವಾದ ಎಂದು ಭಾಷಣ ಪ್ರಾರಂಭ ಮಾಡಿದ ಅವರು, ಕುಮಾರಸ್ವಾಮಿ ಅವರು ನನಗಿಂತ ದೊಡ್ಡ ಪೋರ್ಟ್ ಫೋಲಿಯೋ ತಗೊಂಡಿದ್ದಾರೆ. ನಮ್ಮದು ಬರೀ ತುತ್ತೂರಿ ಊದುವುದು. ಕುಮಾರಸ್ವಾಮಿ ಸಿಎಂ ಆಗುತ್ತಾರೆ. ಕಾಲಭೈರವ ಎದ್ದು ಕುಣಿಯುವ ಸಮಯ ಬಂದಿದೆ. ಜಲವಾಹನ ಹೊರಟಿದೆ. ಮಹಾಲಿಂಗನ ಮೇಲೆ ಅಭಿಷೇಕ ಪ್ರಾರಂಭವಾಗುತ್ತದೆ. ದೇವೇಗೌಡರ ತಾಕತ್ತು ನಿಮಗೇನ್ ಗೊತ್ತು. ಇವರುಗಳಿಗೆ ವೋಟಿನ ಚಿಂತೆ. ನಮಗೆ ಜನರ ಚಿಂತೆ. ಯಾರ್ ಬೇಕಾದರೂ ಕೈ ಬಿಡ್ಲಿ, ನೀವು ಕೈ ಬಿಡಬೇಡಿ. ನಮ್ಮ ಬಳಿ ಹಣ ಇಲ್ಲ. ನಾಳೆಯಿಂದ ಎಲ್ಲಾ ಕಡೆ ಜೆಡಿಎಸ್ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದರು.

ಕೆಲ ತಿಂಗಳ ಹಿಂದೆ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ವಿಪಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡಿದ ಬಳಿಕ ಜೆಡಿಎಸ್ ಸೇರ್ಪಡೆ ಬಗ್ಗೆ ಸಿ.ಎಂ.ಇಬ್ರಾಹಿಂ ನಿವಾಸದಲ್ಲಿ ಹೆಚ್‌ಡಿಕೆ ಹೇಳಿದ್ದರು. ಇಂದು ಅಧಿಕೃತವಾಗಿ ಸಿ.ಎಂ.ಇಬ್ರಾಹಿಂ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಯಿತು.