ಉಡುಪಿ: ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮಿವರ ತೀರ್ಥ ಶ್ರೀಪಾದರು ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಇಟ್ಟಿರುತ್ತಾರೆ ಎಂದು ಸೋದೆ ಹಾಗೂ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ಶಿರೂರು ಮಠದ ಭಕ್ತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮಿವರ ತೀರ್ಥ ಶ್ರೀಪಾದರ ಆಡಳಿತ ಅವಧಿಯಲ್ಲಿ 2017-2018ರ ವರೆಗೆ ಎಲ್ಲಾ ರೀತಿಯ ತೆರಿಗೆ ಪಾವತಿಯ ವಿವರ ಮತ್ತು ಪ್ರತಿಗಳು ಲಭ್ಯವಿದೆ. ಆದಾಯ ತೆರಿಗೆ ಇಲಾಖೆಯವರು ನೋಟಿಸ್ ಜಾರಿ ಮಾಡಿದ ಕೂಡಲೇ ಮಠದ ಆದಾಯಗಳನ್ನು ಬಹಿರಂಗಪಡಿಸಿದ್ದು ದುರುದ್ದೇಶಪೂರಿತವಾಗಿದ್ದು ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಶಿರೂರು ಮಠದ ಭಕ್ತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2018ರಲ್ಲಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವೃಂದಾವಸ್ಥರಾದ ಮೇಲೆ ಮಠದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಹಾಗು ಸ್ವಾಮೀಜಿಗಳ ಚಾರಿತ್ರ್ಯ ಹರಣ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಿರೂರು ಮಠದ ಭಕ್ತ ಸಮಿತಿ ತಿಳಿಸಿದೆ.