ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಸಮಾಜದಲ್ಲಿನ ಅತ್ಯಂತ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಯವರು ತಾಲೂಕಿನ ಮಾಗಲು ಕುಂಬ್ರಹಳ್ಳಿಯ ಮಾಸಾಶನ ಫಲಾನುಭವಿ ಲೋಲಾಕ್ಷಮ್ಮ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ನಡೆಯುತ್ತಿರುವ ವಾತ್ಸಲ್ಯ ಯೋಜನೆಯಡಿ ಕುಂಬ್ರಹಳ್ಳಿ ಲೋಲಾಕ್ಷಮ್ಮರಿಗೆ ಮನೆ ನಿರ್ಮಿಸಿ ನೀಡಲಾಗಿದೆ. ಈ ಯೋಜನೆಯಡಿ ಸುಮಾರು 1000ಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದು, ಸಕಲೇಶಪುರ ತಾಲೂಕಿನಲ್ಲಿ 91 ಮಾಸಾಶನ ಫಲಾನುಭವಿಗಳಿದ್ದು ಈ ವರ್ಷದಲ್ಲಿ 2ಫಲಾನುಭವಿಗಳಿಗೆ ವಾತ್ಸಲ್ಯ ಮನೆ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗಿದೆ. ನೆಲೆಯಿಲ್ಲದ ಅಸಹಾಯಕರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಅವರ ಜೀವನದಲ್ಲಿ ಬೆಳಕು ಮೂಡಿಸಲಾಗುತ್ತಿದೆ. ಇದರಿಂದ ವೃದ್ಧಾಪ್ಯದಲ್ಲಿ ಆತ್ಮವಿಶ್ವಾಸದಿಂದ ಬದುಕಲು ಸಹಕಾರಿಯಾಗಿದೆ ಎಂದರು.
ಹಾಸನ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ರವರು ಮಾತನಾಡುತ್ತಾ ನಿರ್ಗತಿಕ ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿಯೊಂದಿಗೆ ಸೂರು ಇಲ್ಲದೇ ಇರುವ ನಿರ್ಗತಿಕರಿಗೆ ಆಸರೆಗಾಗಿ ಸ್ವಂತ ಸೂರು ಒದಗಿಸುವುದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜಯೆ ಉದ್ದೇಶವಾಗಿದೆ. ಸೂರಿಲ್ಲದೆ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವ ನಿರ್ಗತಿಕರನ್ನು ಗುರುತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆಗಳನ್ನು ನಿರ್ಮಿಸಿ ವಸತಿ ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು 1,000ದಿಂದ 3000ದವರೆಗೆ ಮಾಸಾಶನ ಹಾಗೂ ದಿನನಿತ್ಯದ ಬಳಕೆ ವಸ್ತುಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆ ವಸ್ತುಗಳನ್ನು ಒಳಗೊಂಡ ವಾತ್ಸಲ್ಯ ಕಿಟ್ ಬಡವರಿಗೆ ಆಶಾಕಿರಣವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರೀಶ್ ಮಂಜುನಾಥ್, ತಾಲೂಕಿನ ಯೋಜನಾಧಿಕಾರಿ ರಾಜೇಶ್ ಎಂ ಕಾರ್ಪ, ಮೇಲ್ವಿಚಾರಕರಾದ ಪುಟ್ಟರಾಜು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ಸದಸ್ಯರುಗಳು ಊರಿನ ಮುಖಂಡರು ಭಾಗವಹಿಸಿದ್ದರು





