ಜೂ.21ರಿಂದ ಪ್ರಾರಂಭವಾಗಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಮತ್ತೆ ಮುಂದೂಡಿಕೆ!

ಬೆಂಗಳೂರು: ಜೂನ್​ 21ರಿಂದ ಪ್ರಾರಂಭವಾಗಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ಮುಂದೂಡಿದ್ದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ತಿಳಿಸಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಮುಂದೆ ಯಾವಾಗ ನಡೆಯುತ್ತದೆ ಎಂದು ಇನ್ನೂ ದಿನಾಂಕವನ್ನು ಪ್ರಕಟಿಸಿಲ್ಲ. ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದ್ದು, ನಂತರದ ದಿನಗಳಲ್ಲಿ ಹೊಸ ದಿನಾಂಕ ತಿಳಿಸುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು, ಶಾಲಾ ಸಂಘಟನೆಗಳು, ಶಿಕ್ಷಕರು, ಪಾಲಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಬಹುತೇಕ ಎಲ್ಲ ರೀತಿಯ ಆಫ್​ಲೈನ್ ಪರೀಕ್ಷೆಗಳನ್ನೂ ಮುಂದೂಡಲಾಗುತ್ತಿದೆ.

ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

READ ALSO

ಇದೀಗ ಮುಂದೆ ಹೋದ ತಕ್ಷಣ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೊವಿಡ್ ಎರಡನೇ ಅಲೆಯ ಪ್ರಭಾವ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಹೊಸ ದಿನಾಂಕವನ್ನು ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳು ವಿಚಲಿತರಾಗದೆ ಅಧ್ಯಯನ ಮುಂದುವರಿಸಬೇಕು ಎಂದೂ ಶಿಕ್ಷಣ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊವಿಡ್ ಸೋಂಕು ಪ್ರಸರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಆಫ್​ಲೈನ್ ಪರೀಕ್ಷೆಗಳನ್ನೂ ಮುಂದೂಡಬೇಕು. ಆನ್​ಲೈನ್​ ಪರೀಕ್ಷೆಗಳನ್ನು ನಿಗದಿಪಡಿಸಿದ ಸಮಯದಲ್ಲಿ ನಡೆಸಲು ಯಾವುದೇ ಸಮಸ್ಯೆಯಿಲ್ಲ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಹೇಳಿದೆ. ಇನ್ನು ಕರ್ನಾಟಕದಲ್ಲಿ ಮೇ 24ರವರೆಗೂ ಲಾಕ್​ಡೌನ್​ ಇದ್ದು, ಅದು 24ಕ್ಕೆ ಕೊನೆಯಾಗುವ ಸೂಚನೆಯೂ ಕಾಣುತ್ತಿಲ್ಲ. ಈ ಸಮಯದಲ್ಲಿ ಮಕ್ಕಳನ್ನು ಪರೀಕ್ಷೆ ನೆಪದಲ್ಲಿ ಮತ್ತೆ ಹೊರಗೆ ಕರೆದರೆ ಪಾಲಕರಿಗೂ ಆತಂಕ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರೀಕ್ಷೆಯನ್ನೇ ಮುಂದೂಡುವ ನಿರ್ಧಾರ ಕೈಗೊಂಡಿದೆ.