ಬೆಂಗಳೂರು : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಈ ಕಾಯ್ದೆಯನ್ನು ಜನವರಿ 18ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಅಧಿಕೃತವಾಗಿ ಕಾನೂನು ಜಾರಿಗೊಳಿಸಿ, ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಕುರಿತಂತೆ ಗೆಜೆಟ್ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದ್ದು, ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ 2020ನ್ನು ಜಾರಿಗೊಳಿಸಲಾಗಿದೆ.
ಜಾನುವಾರುಗಳನ್ನು ಯಾವುದೇ ವಿಧಾನದಿಂದ ಕೊಲ್ಲುವುದು ಮತ್ತು ಸಾಮಾನ್ಯವಾಗಿ ಸಾವಿಗೆ ಕಾರಣವಾಗುವ ದೈಹಿಕ ಹಾನಿಯ ಊನಗೊಳಿಸುವಿಕೆ ಮತ್ತು ಗಾಯಗೊಳಿಸುವಿಕೆಯನ್ನು ನಿಷೇಧಿಸಲಾಗಿದೆ.
ಯಾವುದೇ ಕಾನೂನು, ಪದ್ದತಿ ಅಥವಾ ಬಳಕೆಗೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಯಾವೊಬ್ಬ ವ್ಯಕ್ತಿಯೂ ಜಾನುವಾರು ಹತ್ಯೆ ನಡೆಸತಕ್ಕದ್ದಲ್ಲ ಅಥವಾ ಜಾನುವಾರ ಹತ್ಯೆ ನಡೆಸುವಂತೆ ಮಾಡತಕ್ಕದ್ದಲ್ಲ. ಜಾನುವಾರ ಹತ್ಯೆಗಾಗಿ ಮಾರಾಟ ಮಾಡತಕ್ಕದ್ದಲ್ಲ. ಎಂಬುದಾಗಿ ಜಾನುವಾರು ಹತ್ಯೆ ನಿಷೇಧಿಸಿದೆ.
ಒಂದು ವೇಳೆ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಿದಲ್ಲಿ, ಮೂರು ವರ್ಷಗಳಿಗೆ ಕಡಿಮೆಯಿಲ್ಲದ ಆದರೇ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲುವಾಸ ಅಥವಾ ಒಂದು ಜಾನುವಾರಿಗೆ ಐವತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದ್ರೇ, ಐದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು.
ಎರಡನೇ ಬಾರಿ ಅಥವಾ ಮುಂದುವರೆದ ಅಪರಾಧದ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದ್ರೇ, ಹತ್ತು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಮುಂದುವರೆದ ಶಿಕ್ಷೆಯೊಂದಿಗೆ, ಜೊತೆಗೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾವಾಸ ಶಿಕ್ಷೆ ವಿಧಿಸಲಿದೆ.