ವಿಜಯನಗರ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟಿನ ಚೈನ್ ತುಂಡಾಗಿ ಅಪಾರ ಪ್ರಮಾಣ ನೀರು ನದಿ ಪಾತ್ರದಕ್ಕೆ ಹರಿದು ಹೋಗುತ್ತಿದ್ದು, ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಒಂದೇ ಗೇಟ್‌ನಿಂದ 35 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗಿರುವುಸಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಸಂಪೂರ್ಣ ಭರ್ತಿಯಾಗಿದ್ದ ಜಲಾಶಯ ಗೇಟ್‌ಗೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೀಗಾಗಿ ತನ್ನಿಂದ ತಾನೇ ಓಪನ್ ಆಗಿದೆ. ಜಲಾಶಯ ಇತಿಹಾಸದಲ್ಲೇ ಗೇಟ್ ಕಿತ್ತೋಗಿರುವುದು ಇದು ಮೊದಲ ಬಾರಿ.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು:
ಜನಪ್ರತಿನಿಧಿಗಳುಶನಿವಾರ ರಾತ್ರಿ ಗೇಟ್ ಓಪನ್ ಆಗಿದ್ದು, ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ವಿಜಯನಗರ ಜಿಲ್ಲಾ ಎಸ್‌ಪಿ ಶ್ರೀ ಹರಿಬಾಬು ಬಿ.ಎಲ್. ಆಗಮಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಮಾತ್ರವಲ್ಲ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳು, ಅದಿಕಾರಿಗಳು ಅಲರ್ಟ್ ಆಗಿದ್ದಾರೆ. ವಿಜಯನಗರ ಶಾಸಕ ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಧ್ಯರಾತ್ರಿಯಿಂದಲೇ ಡ್ಯಾಂ ಗೇಟ್ ಬಳಿ ಪೊಲೀಸರು ಜಮಾಯಿಸಿದ್ದು, ಪ್ರವೇಶ ನಿರಾಕರಿಸಲಾಗಿದೆ. ಜಲಾಶಯದ 20 ಗೇಟ್‌ಗಳಿಂದ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದರು.
ʼʼಗೇಟ್ ಕಟ್ ಆಗಿರುವ ಕುರಿತು ಜಲ ಸಂಪನ್ಮೂಲ ಸಚಿವರಿಗೆ ಮಾಹಿತಿ ನೀಡಿಲಾಗಿದೆ. ಮುಖ್ಯಮಂತ್ರಿಗೂ ಮಾಹಿತಿ ನೀಡುವ ಪಯತ್ನ ನಡೆದಿದೆ. ಸುಮಾರು 60 ಟಿಎಂಸಿ ನೀರು ಜಲಾಶಯದಿಂದ ನದಿ ಮೂಲಕ ಹೊರ ಬಿಡಬೇಕಿದೆ. ಇಷ್ಟು ಪ್ರಮಾಣದ ನೀರು ಹೊರ ಹೋಗಲು ನಾಲ್ಕಕ್ಕೂ ಹೆಚ್ಚು ದಿನ ಬೇಕು. ಚೈನ್ ಲಿಂಕ್ ಕಟ್ ಆಗಿರುವ ಗೇಟ್ ಸರಿಪಡಿಸುವ ಬಗ್ಗೆ ವಿಶೇಷ ತಾಂತ್ರಿಕ ತಂಡ ಆಗಮಿಸಲಿದೆʼʼ ಎಂದು ಅವರು ಮಾಹಿತಿ ನೀಡಿದರು.
ತುಂಗಭದ್ರಾ ಜಲಾಶಯದ 19ನೇ ಗೇಟ್ ಸಂಪೂರ್ಣ ಡ್ಯಾಮೇಜ್ ಆಗಿರುವ ಸುದ್ದಿ ತಿಳಿಯುತ್ತಲೇ ವಿಜಯನಗರ ಶಾಸಕ ಗವಿಯಪ್ಪ ಅವರು ಸ್ವತಃ ಕಾರು ಚಲಾಯಿಸಿಕೊಂಡು ಡ್ಯಾಂಗೆ ಬಳಿಗೆ ಮಧ್ಯರಾತ್ರಿಯೇ ಆಗಮಿಸಿದರು. ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಎಸ್.ಪಿ ಹರಿಬಾಬು ಅವರಿಂದ ಶಾಸಕ ಗವಿಯಪ್ಪ ಮಾಹಿತಿ ಪಡೆದುಕೊಂಡರು. ಸಿಇಎಲ್ ಭೇಟಿಇನ್ನು ತುಂಗಭದ್ರಾ ನೀರಾವರಿ ವಲಯದ ಸಿಇಎಲ್ ಬಸವರಾಜ್ ಭೇಟಿ ನೀಡಿ ಪರಿಶೀಲಿಸಿದರು. ʼʼ19ನೇ ಕ್ರಸ್ಟಗೇಟ್ ಡಿಲೀಂಕ್ ಆಗಿ ಕಟ್ ಆಗಿ ಹೋಗಿದೆ. ಇದೀಗ ಒಂದೇ ಕಡೆ ಒತ್ತಡ ಬೀಳುವುದನ್ನು ಕಡಿಮೆ ಮಾಡಲಾಗಿದೆ. ಉಳಿದ ಗೇಟ್‌ಗಳನ್ನು ಓಪನ್ ಮಾಡಿ ನೀರು ಬಿಡಲಾಗುತ್ತಿದೆ. ಭಾನುವಾರ ಬೆಂಗಳೂರಿನಿಂದ ತಜ್ಞರ ತಂಡ ಡ್ಯಾಂಗೆ ಬರಲಿದೆʼʼ ಎಂದು ತಿಳಿಸಿದರು. ʼʼಪ್ರತಿವರ್ಷ ಡ್ಯಾಂ ಗೇಟ್‌ಗಳನ್ನು ದುರಸ್ತಿ ಮಾಡಲಾಗುತ್ತದೆ. ಡ್ಯಾಂಗೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಆತಂಕಪಡಬೇಕಾಗಿಲ್ಲ. ಇರುವ ನೀರಲ್ಲಿಯೇ ಕೆಲಸ ಮಾಡಲು ಆಗುತ್ತಾ, ಇಲ್ವಾ ಅನ್ನೋದನ್ನು ತಜ್ಞರ ತಂಡ ನಿರ್ಧರಿಸಲಿದೆ. 69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ಆಗಿದೆʼʼ ಎಂದು ಮಾಹಿತಿ ನೀಡಿದರು.
ಸದ್ಯಕ್ಕೆ 30 ಗೇಟ್‌ಗಳನ್ನು ತೆರೆದು ಟಿಬಿ ಬೋರ್ಡ್ ನೀರು ಹರಿಯಬಿಟ್ಟಿದೆ. ಇದರಿಂದ ಹಂಪಿ, ಜನತಾ ಪ್ಲಾಟ್, ಕಂಪಿ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ರಾತ್ರೋರಾತ್ರಿ ನದಿ ಪಾತ್ರದ ಜನರಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯಕ್ಕೆ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಹರಿವು ಇದ್ದು, ಸಂಜೆ ವೇಳೆಗೆ ಜಾಸ್ತಿಯಾಗಲಿದೆ. 2.5 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯಬಿಟ್ಟಲ್ಲಿ ಪ್ರವಾಹ ಎದುರಾಗಲಿದೆ.
ಸಚಿವ ಶಿವರಾಜ್ ತಂಗಡಗಿ ಭೇಟಿ ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿದರು. ʼʼಅಧಿಕಾರಿಗಳ ಜತೆ ಈ ಬಗ್ಗೆ ಮಾತನಾಡಿದ್ದೇನೆ. ಸದ್ಯದ ಮಟ್ಟಿಗೆ 60ರಿಂದ 65 ಟಿಎಂಸಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. 20 ಅಡಿ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಏನಾಗಿದೆ ಅಂತ ಗೊತ್ತಾಗಲಿದೆ. ಹೀಗಾಗಿ ಡ್ಯಾಂ ನಲ್ಲಿರುವ ನೀರನ್ನು ಖಾಲಿ ಮಾಡುವ ಅನಿವಾರ್ಯತೆ ಉಂಟಾಗಿದೆ. ಡ್ಯಾಂ ನಿರ್ಮಾಣ ಸಮಯದಲ್ಲಿನ ಡಿಸೈನ್ ತರಿಸಲಾಗುತ್ತಿದೆ. ನೀರಿನ ಒತ್ತಡ ಹೆಚ್ಚಿರುವುದರಿಂದ ಕೆಳಗಿಳಿದು ಕೆಲಸ ಮಾಡಲು ಆಗುತ್ತಿಲ್ಲ. ಸದ್ಯ 1 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 2.35 ಲಕ್ಷ ಕ್ಯೂಸೆಕ್ ನೀರು ಬಿಟ್ಟರು ನದಿ ಪಾತ್ರದಲ್ಲಿ ಯಾರಿಗೂ ಯಾವುದೇ ತೊಂದರೆ ಆಗುವುದಿಲ್ಲ. 2.50 ಲಕ್ಷ ಕ್ಯೂಸೆಕ್ ದಾಟಿದರೆ ಪ್ರವಾಹದ ಭೀತಿ ಎದುರಾಗಲಿದೆ. ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ಮಾಹಿತಿ ನೀಡಲಾಗುತ್ತಿದೆʼʼ ಎಂದರು. ಇಂದು ಬೆಂಗಳೂರು, ಹೈದ್ರಾಬಾದ್, ಚೆನ್ನೈಯಿಂದ ತಜ್ಞರ ತಂಡ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದೂ ತಿಳಿಸಿದರು.