ಬೆಂಗಳೂರು, : ಕೋವಿಡ್ ವೈರಸ್ ಹರಡುತ್ತಿದ್ದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ದೇವಸ್ಥಾನಗಳಲ್ಲಿ ನಡೆಯುವ ಎಲ್ಲಾ ಸೇವೆಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ, ದಾಸೋಹ, ತೀರ್ಥ ವಿತರಣೆ ಹಾಗೂ ಜನ ಸಂದಣಿ ಇರುವ ಕಾರ್ಯಕ್ರಮಗಳನ್ನ ಮಾರ್ಚ್ ೨೦ ರ ಆದೇಶ ಅನ್ವಯ ರದ್ದುಪಡಿಸಿತ್ತು.
ದೇವಾಲಯಗಳಲ್ಲಿ ಸೇವೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ ಭಕ್ತಾದಿಗಳಿಂದ ಬರುತ್ತಿದ್ದ ಹಿನ್ನಲೆಯಲ್ಲಿ ಷರತ್ತುಗಳೊಂದಿಗೆ ದೈನಂದಿನ ಸೇವೆ ಸೆಪ್ಟೆಂಬರ್ ೧ ರಿಂದ ಪ್ರಾರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರವು ಅನುಮತಿ ನೀಡಿದೆ.
ಷರತ್ತುಗಳು:
ದೇವಾಲಯಗಳ ಸಂಪ್ರದಾಯಕ್ಕೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶ ಲಭ್ಯತೆ ಆಧಾರದ ಮೇಲೆ ನಡೆಸಬಹುದಾದ ಸೇವೆಗಳ ಸಂಖ್ಯೆಗಳನ್ನು ಆಯಾಯಾ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತ ಅಧಿಕಾರಿಗಳು, ಅನುವಂಶಿಕ ಮೊಕ್ತೇಸರರು, ನಿಗದಿಪಡಿಸಿಕೊಂಡು ಕೋವಿಡ್ -೧೯ (ಕೊರೋನಾ ವೈರಸ್) ಹರಡದಂತೆ ಹಾಲಿ ಇರುವ ಮಾರ್ಗಸೂಚಿಗಳಿಗೆ ಒಳಪಟ್ಟು ಭಕ್ತಾದಿಗಳು ಸೇವೆಗಳಲ್ಲಿ ಪಾಲ್ಗೊಂಡು ಅವಕಾಶ ಕಲ್ಪಿಸುವುದು.
ದೇವಾಲಯಗಳಲ್ಲಿ ಜಾತ್ರಾ ಉತ್ಸವಗಳು, ಬ್ರಹ್ಮ ರಥೋತ್ಸವ , ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವ ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಸದರಿ ಉತ್ಸವಗಳನ್ನು ನಿಲ್ಲಿಸಲು ಸಂಪ್ರದಾಯವಿಲ್ಲದ ದೇವಾಲಯಗಳಲ್ಲಿ ಇವುಗಳನ್ನು ದೇವಾಲಯದ ಆಗಮಿಕರು, ತಂತ್ರಿಗಳು, ಅರ್ಚಕರು, ಸಿಬ್ಬಂದಿಯವರು ಸಾಂಕೇತಿಕವಾಗಿ ಹೋಮಾದಿಗಳು, ಪ್ರಾಯಶ್ಚಿತ್ತಾದಿಗಳನ್ನು ನಡೆಸಿ ಕೇವಲ ಉತ್ಸವಗಳನ್ನು ದೇವಾಲಯದ ಆವರಣ, ಒಳಪ್ರಾಕಾರದೊಳಗೆ ಉತ್ಸವ ದಿನಗಳಲ್ಲಿ ಭಕ್ತಾದಿಗಳು, ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸುವುದು.
ಕೋವಿಡ್ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಈ ಕಚೇರಿಯ ನಿರ್ದೇಶನಗಳಂತೆ ಸಾಮಾಜಿಕ ಅಂತರ ಹಾಗು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಆಯಾಯಾ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಹೊರಡಿಸಿರುವ , ಹೊರಡಿಸಲಿರುವ ಆದೇಶ ಪಾಲಿಸತಕ್ಕದ್ದು.
ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಾಗೂ ಸ್ಯಾನಿಟೈಸರ್ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಸಹಾಯ ಆಯುಕ್ತರುಗಳು ಖಾತರಿಪಡಿಸಿಕೊಳ್ಳದ್ದು ಹಾಗೂ ಮೇಲ್ಕಂಡ ನಿರ್ದೇಶನಗಳ ಉಲ್ಲಂಘನೆ ಕಂಡುಬಂದಲ್ಲಿ ಧಾರ್ಮಿಕ ದತ್ತಿ ಆಯುಕ್ತರಿಗೆ ವರದಿ ಸಲ್ಲಿಸುವುದು.