ಬೆಂಗಳೂರು: ‘ತೌಕ್ತೆ’ ಚಂಡಮಾರುತದ ಪರಿಣಾಮ ಮೇ 20 ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
‘ಚಂಡಮಾರುತದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ಅಲ್ಲದೆ, ಒಳನಾಡಿನಲ್ಲೂ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೇ 16ರಂದು ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
ರಾಜ್ಯದ ಕರಾವಳಿಯನ್ನು ದಾಟಿ, ಮೇ 18ರಂದು ಗುಜರಾತ್ ಕರಾವಳಿ ತಲುಪಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳುಗಳಲ್ಲಿ ದೇಶದಲ್ಲಿ ಕೊರೋನಾ ಭಯಾನಕ ಏರಿಕೆಗೆ ಕಾರಣವಾಗಿ, ಸಾವಿನ ಸುನಾಮಿ ಸಂದರ್ಭದಲ್ಲಿಯೇ, ಈ ವರ್ಷದ ಮೊದಲ ಚಂಡಮಾರುತ ತೌಕ್ತೆ ದೇಶಕ್ಕೆ ಬಂದೆರಗಿದೆ. ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ‘ಅತ್ಯಂತ ತೀವ್ರ ಚಂಡಮಾರುತ’ವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳಲ್ಲಿ ಈ ಚಂಡಮಾರುತ ಪರಿಣಾಮ ಹೆಚ್ಚಾಗಿದ್ದು, ಎನ್ ಡಿ ಎಫ್ ಎಫ್ ನ 50ಕ್ಕೂ ಹೆಚ್ಚು ತಂಡಗಳು ಪರಿಣಾಮದಿಂದ ಉಂಟಾಗುವಂತ ಹಾನಿಯ ರಕ್ಷಣಾ ಕಾರ್ಯಾಚರಣೆಗೆ ಕೂಡ ಸಿದ್ದಗೊಂಡಿವೆ.