ಮಂಗಳೂರು: ಹಾಡು ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ ಗಾಯಕ ಜಗದೀಶ್ ಪುತ್ತೂರು ಅವರಿಗೆ ಓಮನ್ ತುಳುವೆರ್ ಸಂಘಟನೆಯ ವತಿಯಿಂದ ನಗರದ ಪ್ರೆಸ್ ಕ್ಲಬ್ನಲ್ಲಿ ‘ತುಳುನಾಡ ಗಾನ ಗಂಧರ್ವ’ ಬಿರುದು ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರ ಮುಂದಾಳತ್ವದಲ್ಲಿ ಬಿರುದು ಪ್ರಧಾನ, ಸನ್ಮಾನ ನೆರವೇರಿತು. ಈ ಸಂದರ್ಭ ಜಗದೀಶ್ ಪುತ್ತೂರು ಅವರಿಗೆ ಪ್ರಸಿದ್ಧಿ ತಂದಿರುವ ಸ್ವಾಮಿ ಕೊರಗಜ್ಜ ಹಾಡನ್ನು ಹಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಮಾತನಾಡಿ, ಪುತ್ತೂರಿನಲ್ಲಿರುವ ಸಣ್ಣ ಊರಿನಲ್ಲಿರುವ ಒಬ್ಬ ಸಂಗೀತ ಕಲಾವಿದನನ್ನು ಗುರುತಿಸಿ ತುಳುನಾಡಿನ ಗಾನಗಂಧರ್ವ ಎಂಬ ಬಿರುದು ನೀಡಿರೋದು ನಿಜವಾಗಿಯೂ ಸಂತಸದ ಸಂಗತಿ. ಕಲರ್ಸ್ ಕನ್ನಡ ವಾಹಿನಿಯ ಹಾಡು ಕರ್ನಾಟಕ ರಿಯಾಲಿಟಿ ಶೋನಲ್ಲಿ ಜಗದೀಶ್ ಪುತ್ತೂರು ಅವರು ಸ್ವಾಮಿ ಕೊರಗಜ್ಜ ತುಳು ಭಕ್ತಿಗೀತೆ ಹಾಡಿ ಎಲ್ಲರಿಂದಲೂ ಕರತಾಡನವನ್ನು ಗಿಟ್ಟಿಸಿಕೊಂಡರು. ಇದು ಅವರೊಳಗಿನ ಪ್ರತಿಭಾವಂತ ಗಾಯಕನಿಗೆ ದೊರಕಿರುವ ಮಹಾ ಸನ್ಮಾನ. ಇದೀಗ ಅವರಿಗೆ ದೊರಕಿರುವ ತುಳುನಾಡ ಗಾನ ಗಂಧರ್ವ ಬಿರುದು ನನ್ನ ಮುಂದಾಳತ್ವದಲ್ಲಿ ದೊರಕಿರೋದು ಸಂತಸದ ಸಂಗತಿ ಎಂದು ಹೇಳಿದರು.