‘ಬ್ಯಾಂಕಿಂಗ್’ ವಂಚನೆ ತಪ್ಪಿಸಲು ಗ್ರಾಹಕರಿಗೆ ಕೇಂದ್ರ ಸರಕಾರದಿಂದ ಮಹತ್ವದ ಸೂಚನೆ!

ನವದೆಹಲಿ: ಡಿಜಿಟಲ್ ವಹಿವಾಟು ಹೆಚ್ಚಾದಂತೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸಹ ಏರಿಕೆಯಾಗುತ್ತಿವೆ. ವಂಚಕರು ವಿವಿಧ ರೀತಿಯಲ್ಲಿ ಬ್ಯಾಂಕ್ ಗ್ರಾಹಕರ ಖಾತೆಗಳ ಮಾಹಿತಿ ಪಡೆದು ಹಣ ಎಗರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಮತ್ತು ತಂತ್ರಜ್ಞಾನ ರಕ್ಷಣಾ ವಿಭಾಗದ ಟ್ವಿಟ್ಟರ್ ಖಾತೆ ‘ಸೈಬರ್ ದೋಸ್ತ್’ ಮೂಲಕ ಮಹತ್ವದ ಸೂಚನೆಯನ್ನು ನೀಡಲಾಗಿದೆ.

ಬ್ಯಾಂಕಿಂಗ್ ವಹಿವಾಟುಗಳಿಗಾಗಿ ಮಾಡಿಕೊಂಡಿರುವ ಇ ಮೇಲ್ ಖಾತೆ ಮೂಲಕ ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳ ಖಾತೆಯನ್ನು ತೆರೆಯದಂತೆ ತಿಳಿಸಲಾಗಿದ್ದು, ಜೊತೆಗೆ ಆಟೋ ಫಿಲ್ ಫಾರ್ಮ್ ಇರುವ ಬ್ರೌಸರ್ ಗಳಲ್ಲಿ ಡೆಬಿಟ್ / ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಿವಿವಿ ಸಂಖ್ಯೆ, ಕಾರ್ಡ್ ಎಕ್ಸ್ಪೈರಿ ಡೇಟ್ ಮೊದಲಾದ ಮಾಹಿತಿಗಳನ್ನು ಬಳಸಬೇಡಿ ಎಂದು ಸೂಚಿಸಲಾಗಿದೆ.

READ ALSO

ಬ್ಯಾಂಕ್ ಗ್ರಾಹಕರು ಎರಡು ಇ ಮೇಲ್ ಖಾತೆಗಳನ್ನು ಹೊಂದುವುದು ಸೂಕ್ತ ಎಂದು ಸೈಬರ್ ದೋಸ್ತ್ ತಿಳಿಸಿದ್ದು, ಒಂದನ್ನು ದೈನಂದಿನ ಕಾರ್ಯಗಳಿಗೆ ಬಳಸಿದರೆ ಮತ್ತೊಂದು ಇ ಮೇಲ್ ಖಾತೆಯನ್ನು ಬ್ಯಾಂಕಿಂಗ್ ವಹಿವಾಟುಗಳಿಗೆ ಮಾತ್ರ ಬಳಸಬೇಕೆಂದು ತಿಳಿಸಲಾಗಿದೆ. ಬ್ಯಾಂಕಿಂಗ್ ವಹಿವಾಟಿಗೆ ಮಾಡಿಕೊಂಡಿರುವ ಇ-ಮೇಲ್, ಅನಿವಾರ್ಯ ಸಂದರ್ಭಗಳಲ್ಲಿ ಬಳಸಬೇಕಾಗಿ ಬಂದರೆ ನಂಬಿಕಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಸಂವಹನ ನಡೆಸಿ ಎಂದು ತಿಳಿಸಲಾಗಿದೆ.

ವಂಚಕರು ಬ್ಯಾಂಕಿಂಗ್ ಸಂಸ್ಥೆಗಳ ಇ-ಮೇಲ್ ಖಾತೆಯನ್ನೇ ಹೋಲುವಂತೆ ಖಾತೆಗಳನ್ನು ರಚಿಸಿ ಗ್ರಾಹಕರಿಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಕೇಳಿದ ವೇಳೆ ಯಾವುದೇ ಕಾರಣಕ್ಕೂ ಇವುಗಳ ವಿವರವನ್ನು ನೀಡಬೇಡಿ ಎಂದು ಸೈಬರ್ ದೋಸ್ತ್, ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದೆ.