ಬೆಂಗಳೂರು: ಸಂಪುಟ ವಿಸ್ತರಣೆ ಪಟ್ಟಿಗೆ ಅಂತಿಮ ಸ್ವರೂಪ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರಿಂದ ಬುಲಾವ್ ಬಂದಿದ್ದು, ನಿನ್ನೆ ಸಂಜೆ ಅವರು ದಿಲ್ಲಿಗೆ ತೆರಳಿದ್ದಾರೆ. ಪ್ರವಾಹ, ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ’ಎಮರ್ಜೆನ್ಸಿ ಕ್ಯಾಬಿನೆಟ್’ ರಚನೆಗೆ ಹೈಕಮಾಂಡ್‌ನಿಂದ ತಕ್ಷಣ ಸಮ್ಮತಿ ದೊರಕುವ ನಿರೀಕ್ಷೆಯಿದ್ದು, ನೂತನ ಸಚಿವರು ನಾಳೆ ಸಂಜೆಯೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ದಿಲ್ಲಿ ನಿರ್ಧಾರ ವಿಳಂಬವಾದರೆ ಇದು ಬುಧವಾರಕ್ಕೆ ಮುಂದೂಡಿಕೆ ಆಗಬಹುದು.
ಜಾತಿ, ಪ್ರಾದೇಶಿಕ ಪ್ರಾತಿನಿಧ್ಯ ಒಳಗೊಂಡು ಸಾಮಾಜಿಕ ನ್ಯಾಯದಡಿ ಸಂಪುಟ ರಚಿಸಲು ಹೈಕಮಾಂಡ್ ಯೋಚಿಸಿದೆ. ಸಿಎಂ ಬೊಮ್ಮಾಯಿ ಕೂಡ ಈ ನಿಟ್ಟಿನಲ್ಲಿ ಆಲೋಚನೆ ಮಾಡಿದ್ದಾರೆ. 5 ರಿಂದ 10 ಸ್ಥಾನ ಖಾಲಿ ಉಳಿಸಿಕೊಂಡು ಉಳಿದ ಸ್ಥಾನ ಭರ್ತಿ ಮಾಡಲು ಸಿಎಂ ಬಯಸಿದ್ದಾರೆ. ಆದರೆ ‘ಈ ಬಾರಿ 12ರಿಂದ 15 ಸಚಿವರ ನೇಮಕ ಸಾಕು. ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದ ವಿಸ್ತರಣೆ ಕೈಗೊಳ್ಳುವುದು ಉತ್ತಮ’ ಎನ್ನುವುದು ಹೈಕಮಾಂಡ್ ನಿಲುವಾಗಿದೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮುಖ್ಯಮಂತ್ರಿಯವರು ಸೋಮವಾರ ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಮಾತುಕತೆ ನಡೆಯಲಿದೆ. ಸಂಭಾವ್ಯ ಸಚಿವರ ಪಟ್ಟಿಯನ್ನು ಅವರು ಕೊಂಡೊಯ್ದಿದ್ದಾರೆ. ಇದಕ್ಕೆ ಮುನ್ನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೂ ಚರ್ಚಿಸಿದ್ದಾರೆ. ಬಿಎಸ್‌ವೈ ಕೂಡ ತಮ್ಮ ಆಪ್ತರಲ್ಲಿ ಕೆಲವರ ಹೆಸರು ಶಿಫಾರಸು ಮಾಡಿರುವ ಸಾಧ್ಯತೆ ಇರುತ್ತದೆ. ಇದರ ಹೊರತಾಗಿ ಹೈಕಮಾಂಡ್ ಅಪೇಕ್ಷೆಯೇನಿದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ.
ನೂತನ ಸಚಿವರ ಪ್ರಮಾಣದ ವಚನದ ಬಗ್ಗೆ ಯಾವುದಕ್ಕೂ ತಯಾರಾಗಿರುವಂತೆ ಮುಖ್ಯ ಕಾರ್ಯದರ್ಶಿ ಕಾರ್ಯಾಲಯದಿಂದ ಶಿಷ್ಟಾಚಾರ ವಿಭಾಗಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.