ಬೆಳ್ತಂಗಡಿ : ಬೆಳ್ತಂಗಡಿ ಸುತ್ತ ಮುತ್ತ ನಿರಂತರ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೋಲೀಸರು ಯಶಸ್ವಿಯಾಗಿದ್ದಾರೆ
ಈ ಬಗ್ಗೆ ಕಾರ್ಯಾಚರಣೆಗಿಳಿದ ಬೆಳ್ತಂಗಡಿ ಪಿಎಸ್ಐ ಶ್ರೀ ನಂದಕುಮಾರ್ ಎಂಎಂ ಮತ್ತು ಸಿಬ್ಬಂದಿ ಇಂದು ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಎರಡು ಬೈಕಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆಗೊಳಪಡಿಸಿದ್ದಾರೆ. ಆಗ ಇತ್ತೀಚೆಗೆ ಬೆಳ್ತಂಗಡಿ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆಯಿಂದ ಮತ್ತು ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿರುವ ಬೈಕ್ ಎಂಬುದಾಗಿ ಗೊತ್ತಾಗಿದೆ.
ಈ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ನಮ್ಮ ಜೊತೆ ಕುಂಟಿನಿಯ ಇನ್ನಿಬ್ಬರು ಇದ್ದಾರೆ ಎಂದು ತಿಳಿಸಿದ್ದಾರೆ. ಕೂಡಲೇ ಪೊಲೀಸರು ಮತ್ತೆರಡು ಬೈಕಗಳನ್ನು ವಶಕ್ಕೆ ಪಡೆದು ಆರೋಪಿಗಳಾದ ಸುರತ್ಕಲ್ ನ ಕಾನ ನಿವಾಸಿ ವಿಜಯ ಯಾನೆ ಆಂಜನೇಯ, ಮಂಗಳೂರಿನ ಪ್ರದೀಪ್ ಅಲಿಯಾಸ್ ಚೇತನ್ , ಬಂಟ್ವಾಳ ಬಾಳೆಪುಣಿ ಪೂಪಾಡಿಕಲ್ಲಿನ ಸುದೀಶ್ ಕೆಕೆ ಯಾನೆ ಮುನ್ನ, ಬೆಳ್ತಂಗಡಿ ಲಾಯಿಲ ಗ್ರಾಮದ ಕುಂಟಿನಿ ಮೋಹನ್ ಅಲಿಯಾಸ್ ಪುಟ್ಟ, ಹಾಗೇ ಕುಂಟಿನಿಯ ನಿತಿನ್ ಕುಮಾರ್ ಈ ಐವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 4 ಬೈಕ್ ಕಳವಿಗೆ ಬಳಸಿದ ಓಮ್ನಿ ಕಾರು ಹಾಗೂ ಮೂರು ಲಕ್ಷ ಅರುವತ್ತ ಮೂರು ಸಾವಿರ ರೂಪಾಯಿ ಬೆಲೆ ಬಾಳುವ ಕಳವು ಮಾಡಿರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಐದು ಜನ ಕಳ್ಳರ ಜಾಲವನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿ ಆತಂಕದಲ್ಲಿದ್ದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ಭರವಸೆ ಮೂಡುವಂತಾಗಿದೆ.
ಇನ್ನು ಪೊಲೀಸ್ ಕಾರ್ಯಾಚರಣೆ ವೇಳೆ ಆರೋಪಿ ಪ್ರದೀಪ್ ಎಂಬಾತ ಪೊಲೀಸ್ ಸಿಬ್ಬಂದಿಗೆ ಕಚ್ಚಿದ್ದಾನೆ. ಪ್ರದೀಪ್ ಮಂಗಳೂರು ಜೈಲಿನಲ್ಲಿ ನಡೆದ ಡಬ್ಬಲ್ ಮಾರ್ಡರ್ ನ ಆರೋಪಿಯಾಗಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಗಾಂಜಾ ಕೇಸ್, ಮಂಗಳೂರಲ್ಲಿ ಕೊಲೆ ಯತ್ನ ಮುಂತಾದ ಕೇಸ್ ಈತನ ಮೇಲಿದ್ದು ಈತ ರೌಡಿಶೀಟರ್ ಆಗಿದ್ದಾನೆ.
ಈ ಕಾರ್ಯಾಚರಣೆಯು ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂಎಂ ರವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಪ್ರೊ.ಪಿಎಸ್ಐ ಶರತ್ ಕುಮಾರ್ , ಎಎಸ್ಐ ಗಳಾದ ದೇವಪ್ಪ ಎಂ ಕೆ, ಕೆ ಜೆ ತಿಲಕ್, ಸಿಬ್ಬಂದಿಗಳಾದ ಲಾರೆನ್ಸ್ ಪಿ ಆರ್, ಇಬ್ರಾಹಿಂ, ಅಶೋಕ್, ಚರಣ್ ರಾಜ್, ವೆಂಕಟೇಶ್, ಬಸವರಾಜ್ ರವರು ಪಾಲ್ಗೊಂಡಿದ್ದರು.