ನೆಲ್ಯಾಡಿ: ಕಡಬ ತಾಲೂಕಿನ ಉದನೆಯಲ್ಲಿ ಯಾರೂ ಕಿಡಿಗೇಡಿಗಳು ಗಣಪತಿ ಕಟ್ಟೆಯನ್ನು ಪುಡಿ ಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಬೆಳಿಗ್ಗೆಯಷ್ಟೇ ಗಣೇಶೋತ್ಸವ ಅಚರಿಸಲ್ಪಟ್ಟ ಗಣಪತಿ ಕಟ್ಟೆಯನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಹಾನಿಗೊಳಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸ್ಥಳಕ್ಕೆ ಜಮಾಯಿಸಿದ್ದಾರೆ.
ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಬಾಳೆಗಿಡಗಳನ್ನು ಪುಡಿಗೈಯ್ಯಲಾಗಿದ್ದು ಮೆಟ್ಟಿಲನ್ನು ಹಾನಿಗೊಳಿಸಲಾಗಿದೆ. ಕಲ್ಲು ಎತ್ತಿಹಾಕಿ ಮೆಟ್ಟಿಲು ಹಾನಿಗೊಳಿಸಿರುವುದಾಗಿ ಕಂಡು ಬಂದಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದನೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯು 19ನೇ ವರ್ಷದ ಕಾರ್ಯಕ್ರಮವನ್ನು ಜಿಲ್ಲಾಡಳಿತ ಸೂಚನೆಯಂತೆ ನಿನ್ನೆ ಸರಳವಾಗಿ ಗಣಪತಿ ಮೂರ್ತಿಯ ವಿಸರ್ಜನೆಯನ್ನು ಮಾಡಿದ್ದರು. ಅಲ್ಲದೆ ರಾತ್ರಿ 11:00 ರವರೆಗೂ ಸಮಿತಿಯ ತಂಡ ಗಣಪತಿ ಕಟ್ಟೆಯ ಬಳಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.