ಬೆಂಗಳೂರು: ಮೂರು ದಶಕಗಳಿಂದ ಪಶ್ಚಿಮ ಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಾಂ ಸಿದ್ಧಿ ಯವರನ್ನು ಮೇಲ್ಮನೆಗೆ ರಾಜ್ಯಪಾಲರು ನಾಮಕರಣ ಮಾಡಿದ್ದಾರೆ .
ಇವರು ಸಿದ್ಧಿ ಸಮುದಾಯದ ಮೊದಲ ಪದವೀಧರರು . 7ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಪ್ರತಿಭಾವಂತ . ಪದವಿಯ ನಂತರ ವನವಾಸಿಗಳ ನಡುವೆ ಕೆಲಸ ಮಾಡಲು ವನವಾಸಿ ಕಲ್ಯಾಣಾಶ್ರಮದ ಪೂರ್ಣಾವಧಿ ಕಾರ್ಯಕರ್ತರಾದರು.
ಶಿರಸಿ – ಯಲ್ಲಾಪುರ ನಡುವಿನ ಹಿತ್ಲಳ್ಳಿ ಗ್ರಾಮದಲ್ಲಿನ ಪುಟ್ಟ ಮನೆಯಲ್ಲಿ ನೆಲಸಿರುವ ಶಾಂತಾರಾಂ ಸಿದ್ಧಿ ಈ ಹಿಂದೆ ಪಶ್ಛಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದರು.
ಕಾಲೇಜು ದಿನಗಳಿಂದ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.
ಆಫ್ರಿಕಾದ ಜಾಂಬೇಶೀಯಾ ಎಂಬ ಪ್ರದೇಶದ ಸಿಧಾಮೋ ಎಂಬ ಸಮುದಾಯದ ಜನರನ್ನು ಬ್ರಿಟಿಷರು ಕೂಲಿ ಆಳುಗಳನ್ನಾಗಿ ಭಾರತಕ್ಕೆ ಕರೆತಂದು ಬ್ರಿಟೀಷರು ವಾಪಾಸ್ ಹೋದಾಗ ಇವರು ಹೊಟ್ಟೆ ಪಾಡಿಗೆ ಗೋವಾದ ಅಡವಿಯಿಂದ ಉತ್ತರಕನ್ನಡ ಜಿಲ್ಲೆಗೆ ಬಂದು ಇರುವವರೇ ಈ ಸಿದ್ಧಿ ಸಮುದಾಯದವರು.
ಪಶ್ಚಿಮ ಘಟ್ಟದ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅಡವಿಯ ಒಳಗಿಂದ ಅಗೋಚರವಾಗಿ ಹೊರ ಬಂದ ವನ ನಿನಾದದಲ್ಲಿ ಒಂದು ಕೂಗು ಇತ್ತು, ವೇದನೆಯ ಆಚೆಯ ಸಾವಿರದ ನೋವು ಇದ್ದೇ ಇತ್ತು. ನಮ್ಮ ಹಂದರವನು ಕಾಪಾಡಿ ಎಂದು ಮರ, ಗಿಡಗಳು ಹಕ್ಕಿಗಳ ಮೂಲಕ ಆಕಾಶಕ್ಕೆ ಮತ್ತು ನಮ್ಮ ಬದುಕನ್ನು ಉಳಿಸಿ ಎಂದು ಎಲೆಗಳ ಮೂಲಕ ನೆಲಕ್ಕೆ ಸಂದೇಶಗಳು ರವಾನೆ ಆಗುತ್ತಲೇ ಇದ್ದವು. ಅಡವಿ ಹಕ್ಕಿಗಳು ಹಣ್ಣು ಕುಕ್ಕಿದವು, ಮಣ್ಣಿನ ಒಳಗಿಂದ ಬೀಜಗಳು ಮೊಳಕೆ ಬಂದು ಚಿಗುರಿದವು. ಕೂಗಿಗೆ ಒಂದು ರಾಗ ಬದ್ಧ ಪಥ ಇದ್ದರೂ ಎಳೆದೊಯ್ದ ದಡ ಸೇರಿಸುವ ರಥ ಇರಲಿಲ್ಲ.
ಪಶ್ಚಿಮ ಘಟ್ಟದ ಯಲ್ಲಾಪುರದ ಸಿದ್ಧಿ ಬುಡಕಟ್ಟು ಸಮುದಾಯದ ಶಾಂತಾರಾಮ್ ಸಿದ್ಧಿ ಯವರಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಆಗಿರುವುದು ನಿಜಕ್ಕೂ ಸಂತಸದ ವಿಷಯ. ಸಿದ್ಧಿ ಸಮುದಾಯದ ಒಬ್ಬ ವ್ಯಕ್ತಿಗೆ ರಾಜಕೀಯ ಸ್ಥಾನ ಮಾನ ಲಭಿಸಿರುವುದು ಇದು ಪ್ರಪ್ರಥಮ ಬಾರಿಗೆ. ಕತ್ತಲೆಯ ಬದುಕಿನಲ್ಲಿ ಕತ್ತು ಬಗ್ಗಿಸಿಕೊಂಡು ಅಳುಕಿನಲ್ಲಿ ಇದ್ದ ಸಿದ್ಧಿ ಸಮುದಾಯಕ್ಕೆ ಇದು ಒಂದು ಬೆಳಕು ಆಗಬಹುದು ಎಂದು ನಮ್ಮೆಲ್ಲರ ನಿರೀಕ್ಷೆ.