ಚಿಕ್ಕಬಳ್ಳಾಫುರ: ಜಿಲ್ಲೆಯ ಗುಡಿಬಂಡೆತಾಲ್ಲೂಕಿನ ಹಿರೇನಾಗವಲ್ಲಿ ಬಳಿ ಅಕ್ರಮ ಕಲ್ಲು ಕ್ವಾರಿ ಸ್ಪೋಟ ದುರಂತ ಪ್ರಕರಣ ಸಂಬಂಧ ಸ್ಪೋಟದ ತೀವ್ರತೆಗೆ ಟಾಟಾ ಏಸ್ ವಾಹನ, ಬೈಕ್ ಸಂಪೂರ್ಣ ಛಿದ್ರವಾಗಿದೆ.
ಬ್ರಮರವಾಸಿನಿ ಕ್ರಷರ್ ಆಂಡ್ ಕ್ವಾರಿಗೆ ಸೇರಿದ ವಾಹನವಾಗಿದ್ದು, ಚಾಲಕ ರಿಯಾಜ್ ಪವಾಡ ಸದೃಶವಾಗಿ ಬದುಕುಳಿದಿದ್ದಾನೆ.
ಗಾಯಗೊಂಡಿದ್ದ ಚಾಲಕ ರಿಯಾಜ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟದಿಂದ ಆರು ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಚಿವರು, ತನಿಖೆ ವಿಚಾರವಾಗಿ ಘಟನಾ ಸ್ಥಳದಿಂದಲೇ ಮುಖ್ಯಮಂತ್ರಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾನೆ. ಕಾನೂನು ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
‘ಬ್ರಮರವಾಸಿನಿ ಕಲ್ಲು ಕ್ವಾರಿಯಲ್ಲಿ ಸ್ಫೋಟಕ್ಕೆ ಅನುಮತಿ ನೀಡಿಲ್ಲ. ಆದರೆ, ಅಕ್ರಮವಾಗಿ ಸ್ಫೋಟ ಮಾಡಿದ್ದಾರೆ. ಈ ಹಿಂದೆ ಕ್ವಾರಿ ಹಾಗೂ ಕ್ರಷರ್ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಬಳಸಿದ್ದ ಕಂಪ್ರೇಸರ್ ಜಪ್ತಿ ಮಾಡಲಾಗಿತ್ತು. ಪೊಲೀಸರ ಕಣ್ಣು ತಪ್ಪಿಸಲು ಜಿಲೇಟಿನ್ ಕಡ್ಡಿಗಳನ್ನು ಬಚ್ಚಿಟ್ಟಿದ್ದರು. ಬಚ್ಚಿಟ್ಟಿದ್ದ ಕಡ್ಡಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಘಟನೆ ನಡೆದಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾಹಿತಿ ನೀಡಿದರು.