ಮಂಗಳೂರು: ಉಜಿರೆಯ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು. ಈ ಕೃತ್ಯ ನಡೆಸಲು ಇವರಿಗೆ ಸುಪಾರಿ ಕೊಟ್ಟ ವ್ಯಕ್ತಿ ಬೇರೊಬ್ಬನಿದ್ದು ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ರವರು, ಸುದ್ದಿಗೋಷ್ಠಿ ಕರೆದು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಮೊದಲೇ ಮನೆಯವರಿಂದ ಮಾಹಿತಿ ಪಡೆದಿದ್ದೆವು. ಈ ವೇಳೆ, ಸಿಕ್ಕ ಮಾಹಿತಿ ಮತ್ತು ನಾವು ಸಂಗ್ರಹಿಸಿದ ಮಾಹಿತಿ ಆಧರಿಸಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿದ್ದು ಚಿಕ್ಕಮಗಳೂರಿನ ಮೂಡಿಗೆರೆ, ಮಂಡ್ಯ ಜಿಲ್ಲೆಯ ಮಧುಗಿರಿ, ಹಾಸನ, ಬೆಂಗಳೂರಿಗೆ ತೆರಳಿತ್ತು. ಮಧುಗಿರಿಗೆ ತೆರಳಿದ್ದ ತಂಡಕ್ಕೆ ಒಂದಷ್ಟು ಮಾಹಿತಿಗಳು ಸಿಕ್ಕಿದ್ದವು ಎಂದು ಹೇಳಿದರು.
ಮಂಡ್ಯದ ರಂಜಿತ್ (22), ಹನುಮಂತ್ (21), ಮೈಸೂರಿನ ಗಂಗಾಧರ (25) ಮತ್ತು ಬೆಂಗಳೂರಿನ ಕಮಲ್ (22) ಪ್ರಮುಖ ಆರೋಪಿಗಳು. ಮಂಜುನಾಥ ಎಂಬಾತನ (24)ನ ನೆರವಿನಿಂದ ಕೋಲಾರದ ಮಹೇಶ್ (26) ಮನೆಯಲ್ಲಿ ಮಗುವನ್ನು ಇಟ್ಟಿದ್ದರು ಎಂದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಮತ್ತು ಮಹೇಶ್ ಆರೋಪಿಗಳಿಗೆ ಸಹಕರಿಸಿದ್ದರು.
ಬಂಧಿತ ಆರೋಪಿಗಳಲ್ಲಿ ನಾಲ್ಕು ಜನರಿಗೆ ಹೊರಗಿನ ವ್ಯಕ್ತಿ ಏಳು ಲಕ್ಷ ಕೊಡುವುದಾಗಿ ಸುಪಾರಿ ಕೊಟ್ಟಿದ್ದ. ಆತ ಈ ಕುಟುಂಬದ ಪರಿಚಯಸ್ಥ ಎಂಬ ಬಗ್ಗೆ ಮಾಹಿತಿಯಿದ್ದು ಆತನ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಸುಪಾರಿ ನೀಡಿದ ವ್ಯಕ್ತಿ ಸಿಕ್ಕ ಬಳಿಕ ಅಪಹರಣದ ಸ್ಪಷ್ಟ ಉದ್ದೇಶ ಗೊತ್ತಾಗಲಿದೆ
ಬಾಲಕನ ತಂದೆ, ಬಿಜೋಯ್ ನಾಲ್ಕು ವರ್ಷಗಳ ಹಿಂದೆ ಬಿಟ್ ಕಾಯಿನ್ ಖರೀದಿಸಿದ್ದರು. ಆದರೆ, ಆ ಬಳಿಕ ಮೌಲ್ಯ ಕುಸಿಯುತ್ತದೆ ಎಂದು ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಬಿಜೋಯ್ ಬಿಟ್ ಕಾಯಿನ್ ವಹಿವಾಟು ನಡೆಸುತ್ತಿದ್ದಾರೆ. ಈ ಬಗ್ಗೆ ಗೊತ್ತಿದ್ದ ವ್ಯಕ್ತಿಯೇ ಬಿಜೋಯ್ ಬಳಿಯಿಂದ ಹಣ ಕೀಳುವುದಕ್ಕೆ ಪ್ಲಾನ್ ಮಾಡಿದ್ದಾನೆ. ಬಿಟ್ ಕಾಯಿನ್ ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಒಂದಷ್ಟು ಹಣ ವಸೂಲಿ ಮಾಡುವ ಪ್ಲಾನ್ ಹೊಂದಿದ್ದ. ವ್ಯಕ್ತಿ ಯಾರೆನ್ನುವ ಬಗ್ಗೆ ಸ್ಪಷ್ಟ ಸುಳಿವು ಪೊಲೀಸರಿಗೆ ಲಭಿಸಿದ್ದು, ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸದಲ್ಲಿದ್ದಾರೆ.